ರಾಯಚೂರು: ರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ವ್ಯಾಪಾರದಲ್ಲಿ ಉಂಟಾದ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕುಟುಂಬದ ಹಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ರಾಯಚೂರಿನ ಜಲಾಲನಗರದಲ್ಲಿ ಈ ಘಟನೆ ನಡೆದಿದ್ದು, ವಿಷ್ಣು (45), ಅವರ ಪತ್ನಿ ಅರುಣಾ (36), ಮಗ ಶ್ಲೋಕ (10) ಹಾಗೂ ಮಗಳು ಖುಷಿ (7) ಮೃತಪಟ್ಟಿದ್ದಾರೆ. ವಿಷ್ಣು ಅವರು ವೈಯಕ್ತಿಕ ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕುಟುಂಬದಲ್ಲಿ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 31ರ ರಾತ್ರಿ ಮನೆಯವರು ಮಲಗಿದ್ದ ಸಂದರ್ಭದಲ್ಲಿ ವಿಷ್ಣು ಅವರು ಪತ್ನಿ ಅರುಣಾ, ಮಗ ಶ್ಲೋಕ ಹಾಗೂ ಮಗಳು ಖುಷಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯಿಂದ ಹೊರಟು ಚಿಕ್ಕಸುಗೂರು ಗ್ರಾಮದ ಸಮೀಪದ ರೈಲ್ವೆ ಹಳಿಗೆ ತೆರಳಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ವ್ಯಾಪಾರದಲ್ಲಿ ಉಂಟಾದ ಆರ್ಥಿಕ ನಷ್ಟವೇ ಘಟನೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಘಟನೆಯಲ್ಲಿ ವಿಷ್ಣು ಅವರ ಹಿರಿಯ ಮಗ ಸುಹಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಟುಂಬದ ಇತರ ಸದಸ್ಯರು ಮೃತಪಟ್ಟಿರುವ ಸಂದರ್ಭದಲ್ಲಿ ಸುಹಾಸ್ ಹೇಗೆ ಬದುಕುಳಿದಿದ್ದಾನೆ ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ನಿಖರ ಕಾರಣ ಹಾಗೂ ಘಟನೆ ನಡೆದ ಸಂದರ್ಭದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









