ಪುಣೆ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಂಸ್ಥಾಪಕ ಹಾಗೂ ಹಿರಿಯ ನಾಯಕ ಶರದ್ ಪವಾರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪುಣೆಯ ರೂಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಮ್ಮು ಮತ್ತು ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪುತ್ರಿ ಹಾಗೂ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುಪ್ರಿಯಾ ಸುಳೆ, ತಂದೆಗೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಅವರ ಆರೋಗ್ಯದ ಪ್ರಮುಖ ಮಾನದಂಡಗಳು ಸ್ಥಿರವಾಗಿವೆ. ಅವರ ಆರೋಗ್ಯಕ್ಕಾಗಿ ಕಾಳಜಿ ವ್ಯಕ್ತಪಡಿಸಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಉಸಿರಾಡುವಾಗ ಎದೆನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ನಿಗಾದ ಉದ್ದೇಶದಿಂದ ಶರದ್ ಪವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ರೂಬಿ ಹಾಲ್ ಕ್ಲಿನಿಕ್ನ ಮುಖ್ಯ ಹೃದ್ರೋಗ ತಜ್ಞ ಹಾಗೂ ಅಧ್ಯಕ್ಷ ಡಾ. ಪರ್ವೇಜ್ ಕೆ. ಗ್ರಾಂಟ್ ಮಾತನಾಡಿ, ಶರದ್ ಪವಾರ್ ಅವರ ಆರೋಗ್ಯ ಸುಧಾರಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
ಈ ವರ್ಷ ಮೂರನೇ ಬಾರಿ ಆಸ್ಪತ್ರೆಗೆ ದಾಖಲು:
85 ವರ್ಷದ ಶರದ್ ಪವಾರ್ ಅವರು ಈ ವರ್ಷ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 9ರಂದು ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ವೇಳೆ ಎದೆ ಸೋಂಕು ಪತ್ತೆಯಾಗಿದ್ದು, ವೈದ್ಯರು ಹೆಚ್ಚಿನ ನಿಗಾದಲ್ಲಿ ಚಿಕಿತ್ಸೆ ನೀಡಿದ್ದರು. ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಬಳಿಕ ಫೆಬ್ರವರಿ 22ರಂದು ಸೌಮ್ಯ ನಿರ್ಜಲೀಕರಣದ ಸಮಸ್ಯೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿರವಾಗಿದ್ದು, ಅಭಿದಮನಿ ಮೂಲಕ ದ್ರವ ನೀಡಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡ ಬಳಿಕ ಫೆಬ್ರವರಿ 26ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಸದ್ಯ ಶರದ್ ಪವಾರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿಯಲು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾಯುತ್ತಿದ್ದಾರೆ.








