ಬೆಂಗಳೂರು: ದೀಪಾವಳಿ ಹಬ್ಬ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಜ್ಜಾಗಿದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ನವೆಂಬರ್ 6ರಿಂದ 8ರವರೆಗೆ ಒಟ್ಟು 2,600 ಹೆಚ್ಚುವರಿ ವಿಶೇಷ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಿದೆ.
ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನವೆಂಬರ್ 10 ಮತ್ತು 11ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ನವೆಂಬರ್ 8ರಂದು ನರಕ ಚತುರ್ದಶಿ ಹಾಗೂ ನವೆಂಬರ್ 10ರಂದು ಬಲಿಪಾಡ್ಯಮಿ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ಸುಗಮವಾಗಿ ತೆರಳಲು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಟಿಟಿಎಂಸಿಯಿಂದ ವಿಶೇಷ ಬಸ್ಗಳು ಹೊರಡಲಿವೆ.
ಇದಲ್ಲದೆ, ಬಿಎಂಟಿಸಿಯ ಶಾಂತಿನಗರ, ವಿಜಯನಗರ, ಯಶವಂತಪುರ ಹಾಗೂ ಜಯನಗರ ಟಿಟಿಎಂಸಿಗಳು, ಮಲ್ಲೇಶ್ವರಂ 18ನೇ ಕ್ರಾಸ್, ಬಸವೇಶ್ವರನಗರ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಮತ್ತು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣಗಳಿಂದಲೂ ಹೆಚ್ಚುವರಿ ಮೀಸಲು ಬಸ್ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ.
ಯಾವ ಮಾರ್ಗಗಳಿಗೆ ವಿಶೇಷ ಬಸ್ಗಳು?
ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಉಡುಪಿ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ಬಸ್ಗಳು ಸಂಚರಿಸಲಿವೆ. ಇದರ ಜೊತೆಗೆ ಹೈದರಾಬಾದ್, ವಿಜಯವಾಡ ಮತ್ತು ತಿರುಪತಿ ನಗರಗಳಿಗೂ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಮಡಿಕೇರಿ, ವಿರಾಜಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಬಸ್ಗಳು ಲಭ್ಯವಿರಲಿವೆ.
ಇನ್ನು ಶಾಂತಿನಗರ ಟಿಟಿಎಂಸಿಯಿಂದ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚಿ, ಪಾಲಕ್ಕಾಡ್, ತೃಶ್ಶೂರ್, ಎರ್ನಾಕುಲಂ ಹಾಗೂ ಕೋಝಿಕ್ಕೋಡ್ಗೆ ಪ್ರೀಮಿಯಂ ಹಾಗೂ ಐಷಾರಾಮಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಟಿಕೆಟ್ ಬುಕ್ಕಿಂಗ್ಗೆ ರಿಯಾಯಿತಿ:
ಪ್ರಯಾಣಿಕರನ್ನು ಆಕರ್ಷಿಸಲು ಕೆಎಸ್ಆರ್ಟಿಸಿ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ವಿಶೇಷ ರಿಯಾಯಿತಿಯನ್ನೂ ಘೋಷಿಸಿದೆ. ಒಂದೇ ಟಿಕೆಟ್ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಬುಕ್ ಮಾಡಿದರೆ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ಸಿಗಲಿದೆ.
ಹೋಗುವ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಒಟ್ಟು ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಕೊನೆಯ ಕ್ಷಣದ ಟಿಕೆಟ್ ಗೊಂದಲ ಹಾಗೂ ಪ್ರಯಾಣದ ಒತ್ತಡ ತಪ್ಪಿಸಲು ಸಾರ್ವಜನಿಕರು ಮುಂಚಿತವಾಗಿಯೇ ಕೆಎಸ್ಆರ್ಟಿಸಿಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.








