ಹಾಸನ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ.
ಜಾತ್ರಾ ಮಹೋತ್ಸವ ಆರಂಭವಾದ ದಿನದಿಂದ ನವೆಂಬರ್ 2ರ ಮಧ್ಯಾಹ್ನದವರೆಗೆ ಬರೋಬ್ಬರಿ 8 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇನ್ನು ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ದೇವಸ್ಥಾನಕ್ಕೆ ಒಟ್ಟು ₹6.50 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಮಾತನಾಡಿದ ಸಚಿವರು, ಈ ಬಾರಿ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಳೆದ ವರ್ಷ ಕೃಷ್ಣ ಬೈರೇಗೌಡರು ಕೈಗೊಂಡಿದ್ದ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಹೆಚ್ಚುವರಿಯಾಗಿ ಕೆಲವು ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಸುಗಮ ದರ್ಶನ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಗಣ್ಯರ ಭೇಟಿಯ ಬಗ್ಗೆಯೂ ಮಾಹಿತಿ ನೀಡಿದ ಅವರು, ನವೆಂಬರ್ 6ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ. ನವೆಂಬರ್ 8ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಅವರ ಆಪ್ತ ಸಹಾಯಕರು ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ನಿನ್ನೆ ಆರಂಭಗೊಂಡ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದ ಜನರ ಉತ್ಸಾಹ ಕಂಡು ಸಂತಸವಾಗಿದೆ ಎಂದು ಹೇಳಿದ ಸಚಿವರು, ಭಕ್ತರು ಸಹಕರಿಸಿ, ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವಂತೆ ಮನವಿ ಮಾಡಿದರು.
ಒಟ್ಟಿನಲ್ಲಿ, ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದರ್ಶನದ ಜೊತೆಗೆ ದೇವಸ್ಥಾನದ ಆದಾಯವೂ ಹೆಚ್ಚಾಗಿದೆ.









