ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೊಲೀಸ್ ಕಮಿಷನರ್ ಮೂಲಕ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿಸುವ ಪ್ರಯತ್ನ ನಡೆದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಾದ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣವೇ ರಾಜಕೀಯ ಚರ್ಚೆಯ ಕೇಂದ್ರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿರುವ ಬೆನ್ನಲ್ಲೇ ಈ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಅವರನ್ನು ಸಮಾಧಾನಪಡಿಸುವ ಕೆಲಸವೂ ನಡೆಯುತ್ತಿದೆ ಎಂದು ಶ್ರೀರಾಮುಲು ದೂರಿದರು.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಪಕ್ಷದವರು ಇದನ್ನು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿಯೇ ಈ ಸಂಬಂಧ ಮಹಿಳೆಯೊಬ್ಬರು ವಿಚಾರಣೆ ನಡೆಸಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿ ಅವರನ್ನು ಪ್ರಕರಣದಲ್ಲಿ ಎಳೆದು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಕೃಪಾ ಆಳ್ವಾ ಅವರನ್ನು ಉಚ್ಚಾಟನೆ ಮಾಡಿರುವುದರಿಂದ ಪ್ರಕರಣ ಮುಗಿಯುವುದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ನಲ್ಲೇ ಸಾಕಷ್ಟು ಜನರು ಈ ವಿಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಗೃಹ ಸಚಿವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಆರ್ಎಸ್ಎಸ್ ಬಗ್ಗೆ ಮಾತನಾಡುವ ಬದಲು ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅವರು ಮೊದಲ ದಿನದಿಂದಲೂ ಈ ಪ್ರಕರಣದ ಕುರಿತು ಧ್ವನಿ ಎತ್ತುತ್ತಿದ್ದಾರೆ. ಆದರೆ, ಇದೀಗ ಅವರ ಮೇಲೆಯೇ ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಪೊಲೀಸ್ ಕಮಿಷನರ್ ಮೂಲಕ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿಸಲಾಗಿದೆ ಎಂದು ಶ್ರೀರಾಮುಲು ಪುನರುಚ್ಚರಿಸಿದರು.







