ವಿಜಯಸಾಕ್ಷಿ ಸುದ್ದಿ, ಮೈಸೂರು
ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ ಮಹಿಳೆಯೊಬ್ಬರು ನರಳಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಿಷನ್ ಆಸ್ಪತ್ರೆಯ ಸಿಬ್ಬಂದಿ ಅಕ್ಸಿಜನ್ ಮಾಸ್ಕ್ ಇಲ್ಲ ಎಂದು ಸೋಂಕಿತರನ್ನು ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿದೆ. ಹೀಗಾಗಿ ಸೋಂಕಿತೆಯೊಬ್ಬರು ಆಸ್ಪತ್ರೆಯ ಹೊರಗಡೆ ಆಟೋ ರಿಕ್ಷಾದಲ್ಲಿಯೇ ನರಳಾಡಿದ್ದಾರೆ.
ಮಹಿಳೆಯ ಒದ್ದಾಟ ನೋಡಿ ಮರುಕಪಟ್ಟ ಕುಟುಂಬಸ್ಥರು ನೀವು ಕೇಳಿದಷ್ಟು ಹಣ ನೀಡುತ್ತೇವೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅಂಗಲಾಚಿದ್ದಾರೆ. ಆದರೂ ಮರುಗದ ಆಸ್ಪತ್ರೆ ಸಿಬ್ಬಂದಿ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಹೇಳಿದ್ದಾರೆ.
ಈ ಸೋಂಕಿತ ಮಹಿಳೆಯು ಬೆಡ್ ಸಿಗದ ಕಾರಣಕ್ಕೆ ಮೂರು ಆಸ್ಪತ್ರೆಗಳನ್ನು ಅಲೆದಾಡಿ ಬಂದಿದ್ದರು. ನಗರದ ಭೋಗಾದಿಯ ರಾಜಮ್ಮ ಎಂಬ ಮಹಿಳೆಯ ಈ ದುರ್ದೈವಿ. ಕಣ್ಣ ಮುಂದೆಯೇ ಉಸಿರಾಟದ ಸಮಸ್ಯೆಯಿಂದ ನರಳಾಡಿದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಮರುಕ ಪಡಲಿಲ್ಲ.
ಆ ನಂತರ ಬೇರೆಡೆ ಮಾಸ್ಕ್ ತಂದು ದಾಖಲು ಮಾಡಿಕೊಳ್ಳಿ ಎಂದು ಸಂಬಂಧಿಕರು ಬೇಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಇದಕ್ಕೂ ಆಸ್ಪತ್ರೆ ಸಿಬ್ಬಂದಿ ಒಪ್ಪಿಲ್ಲ. ಆನಂತರ ಕುಟುಂಬಸ್ಥರು ಪರಿ ಪರಿಯಾಗಿ ಬೇಡಿಕೊಂಡ ನಂತರ ಒಪ್ಪಿ, ಮಹಿಳೆಯನ್ನು ದಾಖಲಿಸಿಕೊಂಡಿದ್ದಾರೆ.