ವಿಜಯಸಾಕ್ಷಿ ಸುದ್ದಿ, ಹೈದರಾಬಾದ್
ಮದುವೆ ಎಂದರೆ ಹೆತ್ತವರ ಮುಂದೆ, ಆಶೀರ್ವಾದ ಪಡೆದು ಆಗುವುದು ಶೋಭೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನಕಲುಕುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣ ರಾಜ್ಯದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ಪೇಟ್ ನಲ್ಲಿ ನಡೆದಿದೆ.
ಮದುವೆಯಾಗುವುದಕ್ಕಾಗಿ ಅಮೆರಿಕದಿಂದ ರಾಕೇಶ್ ಆಗಮಿಸಿದ್ದ. ಮೇ. 21ರಂದು ಮದುವೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿಯೇ ಆತನ ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ತಾಯಿ ಪಾಲ್ಪಾನೂರಿ ರೇಣುಕಾ(49) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನೊಂದೆಡೆ ತಾಯಿಯ ಸಹೋದರ ಮಹಾಮಾರಿಗೆ ಬಲಿಯಾಗಿದ್ದ. ಹೀಗಾಗಿ ಮದುವೆಯನ್ನು ಮುಂದೂಡಲಾಗಿತ್ತು. ಆದರೆ, ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿಗೆ ಬಲಿಯಾಗಿದ್ದು, ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತ ದೇಹ ಕರೆ ತರಲಾಯಿತು. ಇನ್ನೊಂದೆಡೆ ಮಗನ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮಗ ಭಾರವಾದ ಮನಸ್ಸಿನಿಂದ ತಾಯಿಯ ಶವದ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.
ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ಅಮ್ಮನ ಸಮ್ಮುಖದಲ್ಲಿಯೇ ಮದುವೆಯಾಗಬೇಕೆಂಬ ಕನಸನ್ನು ಮಗ ಕಂಡಿದ್ದ. ಆದರೆ, ತಾಯಿ ಮಾತ್ರ ಮಗನ ಮದುವೆ ದಿನ ಬದುಕಿರಲಿಲ್ಲ. ಮಗ ತಾಯಿಯ ಶವದ ಮುಂದೆಯೇ ಮದುವೆಯಾಗಿದ್ದಾನೆ.