ಹಗರಿಬೊಮ್ಮನಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ನೇಮಿರಾಜ ನಾಯ್ಕ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಜಯಸಾಕ್ಷಿ ಜೊತೆಗೆ ಮಾತನಾಡಿದ ಅವರು, ಕಾರ್ಮಿಕರು ಹಾಗೂ ಗ್ರಾಮೀಣ ಜನತೆಗೆ ಪ್ರಯೋಜನವಾಗುವಂತಹ ಯಾವುದೇ ಪ್ರಮುಖ ಯೋಜನೆಗಳನ್ನು ಬಜೆಟ್‌ನಲ್ಲಿ ಸಮರ್ಪಕವಾಗಿ ನೀಡಿಲ್ಲ ಎಂದು ಆರೋಪಿಸಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೃಷಿ ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನ, 17 ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕಾಗಿತ್ತು. ಆದರೆ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ ರೈತರ ಸಾಲದ ಸಮಸ್ಯೆ ಪರಿಹಾರ ಹಾಗೂ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳನ್ನು ಘೋಷಿಸಬೇಕಾಗಿತ್ತು. ಜನಪರ ಬಜೆಟ್ ಮಂಡಿಸಬೇಕಿದ್ದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ಶಾಸಕ ಕೆ. ನೇಮಿರಾಜ ನಾಯ್ಕ ಟೀಕಿಸಿದರು.



