ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯೊಂದಿಗೆ ಸಲಿಗೆ ಬೆಳಿಸಿಕೊಂಡಿದ್ದ ಆಸಾಮಿಯೊಬ್ಬ ಖಾಸಗಿ ಶಾಲೆಯ ಟೀಚರಮ್ಮನಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಗ್ರಾಮವೊಂದರ ಯುವತಿ, ಮುಂಡರಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಹನಮಂತಪ್ಪ ಮದ್ದನೇರ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿದ್ದಾನೆ.
ಇಬ್ಬರೂ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತ ಮಾತನಾಡುತ್ತಿದ್ದರು. ಒಂದು ಬಾರಿ ಹುಬ್ಬಳ್ಳಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅಷ್ಟಕ್ಕೇ ನಿಲ್ಲದ ಇವರ ಮಾತು-ಕತೆ ಮುಂಡರಗಿಯ ಖಾಸಗಿ ಶಾಲೆಯವರೆಗೂ ಮುಂದುವರೆದಿದೆ. ಆಗ ನೇತಾಜಿ ಟೀಚರಮ್ಮನನ್ನು ಮದುವೆಯಾಗುವ ಭರವಸೆ ನೀಡಿ, ನಂಬಿಸಿದ್ದಾನೆ. ಮುಂದೆ ಕುಟುಂಬದ ಸದಸ್ಯರ ಆರೋಗ್ಯ ಸರಿ ಇಲ್ಲ, ಚಿಕಿತ್ಸೆ ಕೊಡಿಸಲು ಒಂದಿಷ್ಟು ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ್ದ ಟೀಚರಮ್ಮ, 2019ರ ಸೆಪ್ಟೆಂಬರ್ 20 ರಂದು ಲಕ್ಷಗಟ್ಟಲೆ ಹಣ ಹಾಕಿದ್ದಾರೆ. ಅಷ್ಟೇ ಅಲ್ಲ, ಆಗಾಗ ಬೇರೆ ಬೇರೆ ಕೆಲಸಕ್ಕೆ ದುಡ್ಡು ಬೇಕಿತ್ತು ಎಂದು ಬರೋಬ್ಬರಿ ರೂ. 7 ಲಕ್ಷ ವಸೂಲಿ ಮಾಡಿದ್ದಾನೆ.
ಮದುವೆ ಆಗ್ತಾನಲ್ಲ, ಏನೋ ಕಷ್ಟ ಇದೆ ಎಂದು ನಂಬಿದ್ದ ಟೀಚರಮ್ಮ ಮಾತ್ರ ಕೇಳಿದಾಗೆಲ್ಲ ಹಣ ಕಳುಹಿಸಿದ್ದಾರೆ. ತಮ್ಮ ಬಳಿ ಇಲ್ಲದಾಗ ತನ್ನ ಸಹೋದ್ಯೋಗಿಗಳ ಬಳಿ ಸಾಲ ಮಾಡಿ ದುಡ್ಡು ಕೊಟ್ಟಿದ್ದಾರೆ.
ಅಷ್ಟಾದ ಮೇಲೂ ದುಡ್ಡು ಕೇಳುತ್ತಲೇ ಇದ್ದ ಈತನ ಬಗ್ಗೆ ಶಿಕ್ಷಕಿಗೆ ಅನುಮಾನ ಬಂದು, ಹಣ ಕೊಡುವುದನ್ನು ನಿಲ್ಲಿಸಿದ್ದಾರೆ. ಕೊಟ್ಟಿರುವ ಹಣ ವಾಪಸ್ ಕೇಳಲು ಹೋದರೆ ಆತ ಸ್ಪಂದಿಸುತ್ತಲೇ ಇರಲಿಲ್ಲ. ಆಗ ಟೀಚರಮ್ಮಗೆ ತಾವು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಪೊಲೀಸ್ ಠಾಣೆಯ ಮೆಟ್ಟಲೇರಿ, ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮುಂಡರಗಿ ಠಾಣೆಯ ಇನ್‌ಸ್ಪೆಕ್ಟರ್ ಸುನೀಲಕುಮಾರ ಸವದಿ, ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದ್ದಾರೆ.