ಉಧೋ..ಉಧೋ.. ಹುಲಿಗೆಮ್ಮ ಹಾಡು ಬಿಡುಗಡೆ//
ಹುಲಿಗೆಮ್ಮ‌ನ ಸನ್ನಿಧಾನದಲ್ಲಿ ರಾಣಾನ‌ ರಾಗ ರಂಗು!

0
Spread the love

-ಹುಚ್ಚೆದ್ದು ಕುಣಿದ, ದಣಿದ, ಮಣಿದ ಧ್ರುವ ಬಾಸ್ ಫ್ಯಾನ್ಸ್!

Advertisement

-ಮಾಂಗಲ್ಯ ಕದ್ದು ಸಿಕ್ಕು ಬಿದ್ದ ಕಳ್ಳ

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ, ಕೊಪ್ಪಳ:
ಸಿನಿಮಾ ಜಗತ್ತಿಗೆ ಮಾಯಾ ಬಜಾರ್ ಅಂತ ಯಾಕೆ‌ ಕರೀತಾರೆ ಅನ್ನೋದಕ್ಕೆ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಿದರ್ಶನವಾಗಿತ್ತು.

ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾವೊಂದರ ಹಾಡೊಂದು ಕೊಪ್ಪಳ ಜಿಲ್ಲೆಯಲ್ಲಿ ಬಿಡುಗಡೆಗೊಂಡದ್ದು, ಹಾಡನ್ನು ಬಿಡುಗಡೆ ಮಾಡಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಂದದ್ದು, ಧ್ರುವ ಬಾಸ್‌ನ್ನ ಕಣ್ತುಂಬಿಕೊಳ್ಳಲು ಬಂದು ಹಲವರು ಮೊಣಕಾಲು ಕೆತ್ತಿಸಿಕೊಂಡದ್ದು… ಇವೆಲ್ಲ ಮಾಯಾಬಜಾರ್‌ನ ಝಲಕ್.

ಬಹದ್ದೂರ್ ಧ್ರುವ ಭರ್ಜರಿಯಾಗೇ ಎಂಟ್ರಿ ಕೊಟ್ರು. ನೂಕು ನುಗ್ಗಲಿನ ನಡುವೆಯೂ ಇಲ್ಲಿನ ಜನ ಆ್ಯಕ್ಷನ್ ಪ್ರಿನ್ಸ್ ಮತ್ತು ರಾಣಾ ಚಿತ್ರ ತಂಡವನ್ನು ಅದ್ಧೂರಿಯಾಗೇ ಸ್ವಾಗತಿಸಿದ್ರು. ಬ್ಯಾರಿಕೇಡ್‌ಗಳು ಮುರಿದು ಹೋಗುವಷ್ಟು, ಬೆತ್ತ, ಲಾಠಿಗಳು ತುಂಡಾಗುವಷ್ಟು (ಲಾಠಿ ಚಾರ್ಜ್ ಏನಲ್ಲ) ಜನ ಜಮಾಯಿಸಿದ್ದು, ನಿಯಂತ್ರಣಕ್ಕೆ ಪೊಲೀಸರು ಪಟ್ಟ ಪಾಡು, ತಾಯಿ‌ ಹುಲಿಗೆಮ್ಮನಿಗೆ ಪ್ರೀತಿ ಎಂಬಂತಿತ್ತು.

ಅಂತು-ಇಂತು ದಾಂಡಿಗರ ಕೈ ಸರಪಳಿಯ ಮಧ್ಯೆ ಹುಲಿಗೆಮ್ಮ ದೇವಸ್ಥಾನ ಪ್ರವೇಶಿಸಿದ ಚಿತ್ರತಂಡ ಪೂಜೆ ಸಲ್ಲಿಸಿ ವೇದಿಕೆ ಹತ್ತೊಷ್ಟರಲ್ಲಿ ಅರ್ಧ ಗಂಟೆ ಕಳೆದೇ ಹೋಗಿತ್ತು.

ಇಷ್ಟೆಲ್ಲ ಗದ್ದಲದ ನಡುವೆಯೂ ಧ್ರುವ ಅಭಿಮಾನಿಗಳ ಸೆಲ್ಫಿಗೆ ಮುಖವೊಡ್ಡುತ್ತಿದ್ದರು. ವೇದಿಕೆಯ ಮೇಲಿಂದಲೂ ಜನ ಕಾಣುವಂತೆ ತಾವೇ ಸೆಲ್ಫಿ ತೆಗೆದುಕೊಂಡರು.

ಮಾತು ಆರಂಭಿಸುತ್ತಿದ್ದಂತೆ ಡೈಲಾಗ್..ಡೈಲಾಗ್… ಎಂಬ ಅಭಿಮಾನಿಗಳ ಕೂಗು. ಮಾತಿನ ಮಧ್ಯೆ ಪೊಗರು ಸಿನಿಮಾದ ಡೈಲಾಗ್ ತುಣುಕೊಂದನ್ನ ಹೇಳಿದ ಧ್ರುವ ಅಣ್ಣ ಚಿರಂಜೀವಿ ಹಾಗೂ ಅಪ್ಪು ಸರ್ ಅವರನ್ನ ಕಳೆದುಕೊಂಡ ಚಿತ್ರರಂಗ ಚೇತರಿಕೆ ಕಾಣಬೇಕಿದೆ. ಶ್ರೇಯಸ್‌ನಂಥ ಯಂಗ್‌ಸ್ಟರ್‌ಗಳನ್ನ ಅವರ ಸಿನಿಮಾ ನೋಡೋ ಮೂಲಕ ನೀವೆಲ್ಲ ಅವರನ್ನ ಬೆಳೆಸಬೇಕಿದೆ. ರಾಣಾ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಈ ಭಾಗಕ್ಕೆ ಬಂದದ್ದು ತುಂಬಾನೇ ಖುಷಿ.. ಹೊಸಪೇಟೆ ಅಂದ್ರೆ ಬಹಳ ಇಷ್ಟ ಎನ್ನುತ್ತಿದ್ದಂತೆ, “ರಾಯಚೂರಣ್ಣಾ..” ಎನ್ನುವ ದೊಡ್ಡ ಧ್ವನಿ ಧ್ರುವಗೆ ಕೇಳಸ್ತು. ಆಗ “ಏಯ್.. ರಾಯಚೂರು ನಮ್ದೇ ಸುಮ್ಕಿರ್ಲಾ” ಎಂದು ಪ್ರೀತಿಯಿಂದ ಗದರಿದರು.

ಮತ್ತೇ ಮಾತು ಮುಂದುವರಿಸಿದ ಧ್ರುವ, ಶ್ರೇಯಸ್ ಮತ್ತು ತಾವು ಒಂದೇ ಜಿಮ್‌ಗೆ ಹೋಗ್ತಿವಿ, ಅಲ್ಲಿ ರಾಣಾ ಸಿನಿಮಾ ಬಗ್ಗೆನೇ ಜಾಸ್ತಿ ಮಾತಾಡ್ತಿವಿ.. ಸಿನಿಮಾ ತುಂಬಾ ಚನ್ನಾಗಿ ಬಂದಿದೆ.. ‌ಇವತ್ತು ಇಲ್ಲಿ ಬಿಡುಗಡೆ ಆಗ್ತಿರೊ ಹಾಡನ್ನ ಎಲ್ರೂ ಷೇರ್ ಮಾಡಿ ಎಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದ್ರು.

ಇದಕ್ಕೂ ಮುನ್ನ ಮಾತನಾಡಿದ ಚಿತ್ರರಂಗದ ಖ್ಯಾತ ನಿರ್ಮಾಪಕ ಗಂಡುಗಲಿ ಕೆ.ಮಂಜು, ಇದು ನನ್ನ ಪುತ್ರನ ಮೂರನೇ ಸಿನಿಮಾ. ಹರಸಿ, ಹಾರೈಸಿ ಅಂದ್ರು.‌

ರಾಣಾ ಚಿತ್ರದ ನಿರ್ಮಾಪಕ ಪುರುಷೋತ್ತಮ ಮಾತನಾಡಿ, ರಾಣಾ ಚಿತ್ರದಲ್ಲಿ ಬೇರೊಂದು ಹಾಡು ರೆಡಿಯಾಗಿತ್ತು. ಆದರೆ ಹುಲಿಗೆಮ್ಮದೇವಿಯ ಪರಮಭಕ್ತನಾದ ನಾನು ಆ ಹಾಡನ್ನ ಕೈ ಬಿಟ್ಟು, ಇಂದು ಬಿಡುಗಡೆ ಆಗ್ತಿರೊ ಈ ಹಾಡನ್ನ ಸೇರಿಸಿದೆ. ಹಾಡು‌ ಖಂಡಿತವಾಗಿಯೂ ಎಲ್ರಗೂ ಇಷ್ಟ ಆಗುತ್ತೆ.. ದೂರದ ಬೆಂಗಳೂರಿನಿಂದ ಬಂದು ನಮ್ಮ ಚಿತ್ರದ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡಿರೊ ಧ್ರುವ ಬಾಸ್‌ಗೆ ಥ್ಯಾಂಕ್ಸ್… ಚಿತ್ರದ ಡೈರೆಕ್ಟರ್ ನಂದ ಕಿಶೋರ್ ಸಿನಿಮಾ ರಿಚ್ ಆಗಿ ಬರುವಂತೆ ಚಿತ್ರಿಸಿದ್ದಾರೆ. ಕೆ.ಮಂಜು ಸರ್ ಈ ಸಿನಿಮಾದ ಬೆಂಗಾವಲಾಗಿ ನಿಂತಿದಾರೆ. ಚಂದನ್ ಶೆಟ್ಟಿ ತುಂಬ ಚನ್ನಾಗಿ ಮ್ಯೂಜಿಕ್ ಮಾಡಿದಾರೆ. ಇಮ್ರಾನ್ ಸರ್ ಎರಡು ಹಾಡುಗಳಿಗೆ, ಮುರಳಿ ಸರ್ ಎರಡು ಹಾಡುಗಳಿಗೆ ಕೊರಿಯೊಗ್ರಾಫಿ ಮಾಡಿದಾರೆ ಎಂದು ಏದುಸಿರಿನಿಂದ ಹೇಳಿ ಮಾತು ಮುಗಿಸಿದರು.

ನಿರ್ದೇಶಕ ನಂದ ಕಿಶೋರ್,  ಮಾತು ಆರಂಭಿಸುವ ಮುನ್ನ ಅಗಲಿದ ಯುವರತ್ನನಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಜನಸ್ತೋಮ ಪುನೀತ್‌ಗೆ ಗೌರವ ಸಲ್ಲಿಸುವಂತೆ ಸೂಚಿಸಿದರು. ರಾಣಾ ಸಿನಿಮಾ ಎಲ್ರಗೂ ಇಷ್ಟ ಆಗುತ್ತೆ ಅಂತ ಭರವಸೆ ನೀಡಿ ಮಾತಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

*ಸಿಕ್ಕಿ ಬಿದ್ದ ಕಳ್ಳ
ಧ್ರುವ ಸರ್ಜಾ ಮತ್ತು ಚಿತ್ರತಂಡವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಜನಸ್ತೋಮ ಕಂಡು ಕಳ್ಳನೊಬ್ಬ ಮಹಿಳೆಯ ಮಾಂಗಲ್ಯ ಕತ್ತರಿಸಿ ಪರಾರಿಯಾಗುತ್ತಿದ್ದುದನ್ನ ಕಂಡ ಸ್ಥಳೀಯರು ಆತನನ್ನ ಪೊಲೀಸರ ಅತಿಥಿಯನ್ನಾಗಿಸಿದರು.

ಕುಸಿದು ಬಿದ್ದರೂ ಸೆಲ್ಫಿ..!
ವೇದಿಕೆ ಮೇಲೆ ಅನುಮತಿ ಇಲ್ಲದೇ ಪ್ರವೇಶಿಸಿದ ಅಭಿಮಾನಿಯೊಬ್ಬ ಧ್ರುವ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕುಸಿದು ಬಿದ್ದ. ಆದರೂ ಧೃತಿಗೆಡದೆ ಎದ್ದು ನಿಂತು ಸೆಲ್ಫಿ ತಗೊಂಡ. ಪೊಲೀಸರು ಅನಾಮತ್ತಾಗಿ ಎತ್ತಿ ಹೊರಹಾಕಿದರು. ಆತನ ಹುಚ್ಚಾಟ ಕಂಡ ಕೆಲವರು ಪೊಲೀಸರನ್ನೇ ವೇದಿಕೆಯಿಂದ ಕೆಳದಬ್ಬಿ ಹುಚ್ಚಾಟ ಮೆರೆದರು. ಕೊನೆಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅವರನ್ನೆಲ್ಲ ವೇದಿಕೆಯಿಂದ ಕೆಳಗಿಳಿಸಿದರು.

ಅಚ್ಚುಕಟ್ಟಾಗಿ ನಡೆಯಲಿಲ್ಲ ಕಾರ್ಯಕ್ರಮ
ಧ್ರುವ ಸರ್ಜಾ ಆಗಮಿಸುವ ವಿಷಯ ಪೊಲೀಸ್ ಇಲಾಖೆಗೆ ನಾಲ್ಕು ದಿನಗಳ ಮುಂಚೆಯೇ ಗೊತ್ತಿದ್ದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ವೇದಿಕೆ ಅಚ್ಚುಕಟ್ಟಾಗಿ ಇರಲಿಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಎನ್ನುವಂತಾಗಿದ್ದು ಸೌಮ್ಯ ಸ್ವಭಾವದ ಚಿತ್ರಪ್ರೇಮಿಗಳಿಗೆ, ಅಭಿಮಾನಿಗಳಿಗೆ ಬೇಸರದ ಸಂಗತಿ‌.


Spread the love

LEAVE A REPLY

Please enter your comment!
Please enter your name here