-ಚಾಲೇಂಜಿಂಗ್ ಸ್ಟಾರ್‌ಗೆ ಮತ್ತೆ ಚಾಲೆಂಜಿಂಗ್ ಡೇಯ್ಸ್
-ನೇರ-ನಿಷ್ಠುರತೆಯೇ ಮುಳುವಾಯ್ತೆ? ಅಥವಾ ಸ್ಟಾರ್‌ಗಿರಿ ತಲೆ ತಿರಗಸ್ತಿದಿಯಾ?
-ನಟ ದರ್ಶನ್‌ಗೂ-ವಿವಾದಗಳಿಗೂ ಇರೊ ನಂಟು ಇಂದು-ನಿನ್ನೆಯದಲ್ಲ
ವಿಶೇಷ ವರದಿ.
-ಬಸವರಾಜ ಕರುಗಲ್.
ಮಾಡೋಕೆ ವರುಷ, ಒಡೆಯೋಕೆ ನಿಮಿಷ ಅನ್ನೋ ಮಾತಿಗೂ ನಟ ದರ್ಶನ್‌ನ ಇವತ್ತಿನ ಸ್ಥಿತಿಗೆ ಹೆಚ್ಚು ಸಾಮ್ಯತೆ ಇರುವ ಸಮಯವಿದು.
ಅಂಬಿಕಾ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಅಡಿ ಇಟ್ಟ ದರ್ಶನ್, ವಿನೋದ್‌ರಾಜ್ ಅಭಿನಯದ ಮಹಾಭಾರತ ಹೆಸರಿನ ಸಿನಿಮಾದಲ್ಲಿ ವಿಲನ್ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟರು. ಆನಂತರ ಭಾ.ಮಾ.ಹರೀಶ್ ನಿರ್ಮಾಣದ ಸತ್ಯ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕನ ನಟನಾಗಿ ಗುರುತಿಸಿಕೊಂಡರು. ಈ ಸಿನಿಮಾ ಬಿಡುಗಡೆಯಾಗಿ ದಶಕದ ಮೇಲೆ ಈ ಸಿನಿಮಾ ಹೆಸರಿನಲ್ಲೇ ವಿವಾದ ಉದ್ಭವಿಸಿತು. ಕಿಚ್ಚ ಸುದೀಪ್ ಮತ್ತು ದಚ್ಚು ದರ್ಶನ್ ಸ್ನೇಹ ಮಾಸಲು ಕಾರಣವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿವಾದ ಇತ್ತೀಚಿನದಾದರೂ ಮೆಜೆಸ್ಟಿಕ್ ದರ್ಶನ್ ನಾಯಕನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಎಂಬುದನ್ನು ಗಮನಿಸಬೇಕು.
ಹಲವು ಸಿನಿಮಾಗಳ ನಂತರ ನನ್ನ ಪ್ರೀತಿಯ ರಾಮು ಸಿನಿಮಾ ಮೂಲಕ ಅಪಾರ ಅಭಿಮಾನಿಗಳನ್ನು ದರ್ಶನ್ ಸಂಪಾದಿಸಿಕೊಂಡರು ಎಂದರೆ ಅತಿಶಯೋಕ್ತಿ ಏನಲ್ಲ. ಆ ಪಾತ್ರ ನಿರ್ವಹಣೆಗೆ ಅಷ್ಟೊಂದು ಡೇಡಿಕೇಟ್ ವರ್ಕ್ ಮಾಡಿದ್ದರು. ಆದರೂ ಸಿನಿಮಾ ಸೋತಿದ್ದು ವಿಪರ್ಯಾಸ.
ಬಳಿಕ ಪ್ರೇಮ್ ನಿರ್ದೇಶನದ ಕರಿಯ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ನಟಿಸಿದರು. ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಬೇಕಿತ್ತು. ಆದರೆ ಆ ಪಾತ್ರ ದರ್ಶನ್ ಪಾಲಾಗಿದ್ದು , ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸದಿರುವುದು ಹೊಸದೇನಲ್ಲ. ಕರಿಯ ತಕ್ಕ ಮಟ್ಟಿಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಅದಕ್ಕೆ ಖಂಡಿತವಾಗಿ ದರ್ಶನ್ ಹೆಸರು ಕಾರಣವಲ್ಲ, ನಿರ್ದೇಶಕ ಪ್ರೇಮ್ ಸಿನಿಮಾ ಎನ್ನುವ ಕಾರಣಕ್ಕೆ ಕರಿಯ ಗೆದ್ದದ್ದು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ದುರಂತವೆಂದರೆ ಈ ಇಬ್ಬರೂ ನಿರ್ದೇಶಕರ ಈ ಸಿನಿಮಾಗಳು ತೆರೆ ಕಂಡು ಎರಡು ದಶಕಗಳೇ ಗತಿಸಿವೆ. ಈಗ ದರ್ಶನ್ ಇವರಿಬ್ಬರ ವಿರೋಧ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.
ಇಷ್ಟೊತ್ತಿಗಾಗಲೇ ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದವು. ಹಾಗೆ ನೋಡಿದರೆ ಈ ವಿವಾದಗಳು ದರ್ಶನ್‌ಗೆ ಸುತ್ತಿಕೊಳ್ಳುತ್ತಿರುವುದು ಇತ್ತಿಚೇಗೇನಲ್ಲ. ದರ್ಶನ್ ಸುಮಾರು ಆರೆಂಟು ಸಿನಿಮಾ ಮಾಡಿದ ನಂತರ ಖಾಸಗಿ ವಾಹಿನಿಯೊಂದು ಅವರ ಸಂದರ್ಶನ ಮಾಡಿದ ವೇಳೆ “ಹಣ ಕೊಟ್ಟರೆ ಸಿಂಗಲ್ ಪೀಸ್ ಬಟ್ಟೆಯಲ್ಲೇ ಆ್ಯಕ್ಟ್ ಮಾಡೋಕೂ ರೆಡಿ” ಎನ್ನುವ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆಗ ದರ್ಶನ್‌ಗೆ ಈಗಿನ ಸ್ಟಾರ್‌ಡಮ್ ಇರಲಿಲ್ಲ. ಹಾಗಾಗಿಯೇ ಅದು ವಿವಾದದ ರೂಪ ತಾಳಲಿಲ್ಲವಷ್ಟೇ.
ಆನಂತರ ದರ್ಶನ್ ಅಕ್ಷರಶಃ ವಿಲನ್‌ನಂತೆ ಕಂಡದ್ದು ಅವರ ಪತ್ನಿ ಜೊತೆಗಿನ ವಿವಾದದಲ್ಲಿ. ಆ ವೇಳೆ ಜೈಲನ್ನು ಕಂಡ ದರ್ಶನ್ ಕೈ ಹಿಡಿದದ್ದು ಅವರ ಸಹೋದರ ದಿನಕರ್ ನಿರ್ದೇಶಿಸಿದ ಸಾರಥಿ ಸಿನಿಮಾ.
ಅಲ್ಲಿಂದ ಅವರ ಕೌಟುಂಬಿಕ ವಿವಾದ ಸುಖಾಂತ್ಯ ಕಂಡಿತು. ಸಾರಥಿಯ ಹಿಟ್ ಅನುಕಂಪವಾಗಿ ಫ್ಯಾನ್ ಫಾಲೋಯಿಂಗ್ ಅವರನ್ನೇ ಬಾಕ್ಸಾಫೀಸ್ ಸುಲ್ತಾನ ಎನ್ನುವಷ್ಟರಮಟ್ಟಿಗೆ ತಂದು ನಿಲ್ಲಿಸಿತು. ಎಲ್ಲವೂ ಸರಿಯಾಯ್ತು ಎಂದುಕೊಳ್ಳುವಷ್ಟರಲ್ಲೇ ನವರಸ ನಾಯಕ ಜಗ್ಗೇಶ್ ಜೊತೆಗೆ ತಾವು ನಟಿಸಿದ್ದ ಅಗ್ರಜ ಸಿನಿಮಾದ ಪ್ರಮೋಷನ್ ವರ್ಕ್‌ಗೆ ಸಂಬಂಧಿಸಿದಂತೆ ವಿವಾದದ ಅಲೆಗೆ ಸಿಲುಕಿದರು.
ಆನಂತರ ಸ್ಯಾಂಡಲ್‌ವುಡ್ ದೋಸ್ತಿ ಎಂದೇ ಕರೆಸಿಕೊಂಡಿದ್ದ ಕಿಚ್ಚ ಸುದೀಪ್ ಜೊತೆ ವಿವಾದ ಅಂಟಿಕೊಂಡಿತು. ಇವರಿಬ್ಬರ ವಿಷಯ ಸ್ಟಾರ್‌ಗಿರಿಗೆ ಸಂಬಂಧಿಸಿದ್ದು. ಸ್ಟಾರ್‌ಪಟ್ಟದ ಕಾದಾಟ ಅಣ್ಣಾವ್ರು-ವಿಷ್ಣುದಾದಾ ಕಾಲದಿಂದಲೂ ಇದೆ. ಆದರೆ ಆಗ ಆರೋಗ್ಯಕರ ಪೈಪೋಟಿ ಇತ್ತು. ದಚ್ಚು-ಕಿಚ್ಚನದ್ದು ಶೀತಲಸಮರವಲ್ಲ, ಅಭಿಮಾನಿಗಳಿಂದಲೂ ಆಗಾಗ ಸಮರ ನಡೆಯುತ್ತಲೇ ಇರುತ್ತೆ. ಇದಕ್ಕೆ ತಾಜಾ ಉದಾಹರಣೆ “ಮದಕರಿ” ಸಿನಿಮಾದ ಹೆಸರು.
ಈಗ 25 ಕೋಟಿ ರೂ. ಫೇಕ್‌ನಿಂದ ಶುರುವಾದ ದರ್ಶನ್ ಜೊತೆಗಿನ ವಿವಾದ ಕಳೆದ ಒಂದು ವಾರದಿಂದ ಮುಂದುವರಿದಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಅರುಣಾಕುಮಾರಿ ಸದ್ಯ ಹಿನ್ನೆಲೆಗೆ ಸರಿದಿದ್ದು, ನಿರ್ಮಾಪಕ ಉಮಾಪತಿ ಜೊತೆ ತೆರೆಮರೆ ಯುದ್ಧ ಶುರುವಾದಂತಿದೆ. ಇದರಲ್ಲಿ ದೊಡ್ಮನೆ ಆಸ್ತಿ ವಿಚಾರವನ್ನು ಥಳುಕು ಹಾಕಿಕೊಂಡದ್ದು ಬೇಡದ ವಿಷಯವಾಗಿತ್ತೇನೊ?
ಈಗ ದರ್ಶನ್ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಧ್ಯಮದವರ ಬಗ್ಗೆನೂ ಬೈತಾರೆ. ಜೊತೆ ತಮ್ಮ ಸಿನಿಮಾ ನಿರ್ದೇಶಿಸಿದ ನಿರ್ದೇಶಕರ ಬಗ್ಗೆಯೂ ಅಗೌರವ ತೋರುತ್ತಾ, ಎರಡು ದಶಕಗಳಿಂದ ಕಷ್ಟಪಟ್ಟು ಗಳಿಸಿದ ಒಳ್ಳೇಯ ಇಮೇಜ್‌ನ್ನ ಡ್ಯಾಮೇಜ್ ಮಾಡಿಕೊಳ್ಳುವಂತೆ ಕಾಣುತ್ತಿದೆ. ಇಂದ್ರಜಿತ್ ಲಂಕೇಶ್ ಬರೀ ಸಿನಿಮಾ ನಿರ್ದೇಶಕ ಮಾತ್ರವಲ್ಲ, ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವುದರಿಂದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇದು ಸೊಕ್ಕಾ ಅಥವಾ ನೇರ-ನಿಷ್ಠುರ ನಡವಳಿಕೆಯಾ?
ನಿಷ್ಠುರವಾದಿ ಲೋಕ ವಿರೋಧಿ ಎಂಬ ಮಾತಿದೆ. ದರ್ಶನ್ ಅವರ ಮಾತುಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದರೆ ಅವರೊಬ್ಬ ಸ್ಟ್ರೇಟ್ ಫಾರ್‌ವರ್ಡ್ ಮ್ಯಾನ್ ಅಂತ ಯಾರಿಗಾದರೂ ಅನಿಸುತ್ತೆ. ಆದರೂ ನೇರ-ನಿಷ್ಠುರವಾಗಿ ಮಾತನಾಡುವಾಗ ಸಭ್ಯತೆ ಎಲ್ಲೆ ಮೀರಬಾರದಲ್ಲವೇ? ಹಾಗಾಗಿ ಕೆಲವೊಮ್ಮೆ ದರ್ಶನ್‌ಗೆ ಸ್ಟಾರ್ ಪಟ್ಟ, ಗಳಿಸಿದ ಹಣ ತಲೆ ತಿರುಗಿಸುತ್ತಿದೆ ಎಂಬ ಭಾವ ಸಹಜವಾಗಿ ಎಲ್ಲರಲ್ಲೂ ಮೂಡುತ್ತೆ. ಇದರಿಂದ ಡ್ಯಾಮೇಜ್ ಆಗೋದು ಬೇರಾರಿಗೂ ಅಲ್ಲ, ಸ್ವತಃ ದರ್ಶನ್ ಇಮೇಜ್‌ಗೆ.
ದರ್ಶನ್ ಸದಾ ವಿವಾದದ ಸುತ್ತ ಸಿಲುಕುತ್ತಾರೆ ಎಂಬುದು ಎಷ್ಟು ಸತ್ಯವೊ ಅವರೊಬ್ಬ ಅಪ್ಪಟ ಕೃಷಿಕ, ಶ್ರಮಜೀವಿ, ಮಾನವೀಯ ಮೌಲ್ಯವುಳ್ಳ ನಟ ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈಗಲಾದರೂ ದರ್ಶನ್ ಪ್ರಬುದ್ಧತೆ ಬೆಳೆಸಿಕೊಳ್ಳಲಿ, ಭಾಷೆ ಸುಧಾರಿಸಿಕೊಳ್ಳಲಿ, ಕೋಪ ನಿಯಂತ್ರಿಸಿಕೊಳ್ಳಲಿ ಎಂಬುದು ಅವರನ್ನು ಇಷ್ಟಪಡುವ ಎಲ್ಲ ವರ್ಗಗಳ ಜನರ ಪ್ರೀತಿಯ ಹಕ್ಕೋತ್ತಾಯ.
ಡಾ.ಶಿವಣ್ಣ-ರವಿ ಮಧ್ಯಸ್ಥಿಕೆ ವಹಿಸಿದರೆ ಸರಿಯಾಗಬಹುದಾ?
ಚಿತ್ರರಂಗ ಅಂದ ಮೇಲೆ ಹಲವು ಸಮಸ್ಯೆಗಳು ಸಹಜ. ಚಿತ್ರರಂಗದ ಹಿರಿಯರು ಅದನ್ನ ಬಗೆ ಹರಿಸುವುದು ಡಾ.ರಾಜ್, ಅಂಬಿ ಕಾಲದಿಂದಲೂ ಬಂದಿದೆ. ಈಗ ಖಾಸಗಿ ವಿಚಾರಗಳನ್ನು ಬಿಟ್ಟು ನಿರ್ದೇಶಕರು-ನಿರ್ಮಾಪಕ ಹಾಗೂ ನಟ ದರ್ಶನ್ ಸುತ್ತ ನಡೆಯುತ್ತಿರುವ ವಿವಾದವನ್ನು ಬಗೆಹರಿಸಲು ಚಿತ್ರರಂಗದ ಹಿರಿಯರಾದ ಡಾ.ಶಿವಣ್ಣ ಮತ್ತು ರವಿಚಂದ್ರನ್ ಮುಂದಾಗಬೇಕಿದೆ. ಎಲ್ಲರಿಗೂ ಹಂಸಕ್ಷೀರ ನ್ಯಾಯ ನೀಡಬೇಕಿದೆ.