ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಅಷ್ಟೇ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್’ಗಾಗಿ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಬಿಜೆಪಿ 35 ವಾರ್ಡ್ ಗಳ ಪೈಕಿ 30 ವಾರ್ಡ್ ಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್ ಇನ್ನೂವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಬೆನ್ನಲ್ಲೇ ಪತ್ನಿಯರಿಗೆ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ರಾತ್ರೋರಾತ್ರಿ ಧರಣಿ ನಡೆಸಿದರೇ, ಮತ್ತೊಬ್ಬ ಕಾರ್ಯಕರ್ತ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬೆಟಗೇರಿಯ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲು ಇದ್ದ 5ನೇವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪಡೆಯಲು ತನ್ನ ಪತ್ನಿಗಾಗಿ ಪ್ರಯತ್ನ ನಡೆಸಿದ್ದ ವಿಷ್ಣು ಬಗಾಡೆ ಟಿಕೆಟ್ ಕೈ ತಪ್ಪಿದ ಪರಿಣಾಮ ತನ್ನ ಆಪ್ತರೆದರು ಕಣ್ಣೀರು ಹಾಕಿದ್ದು, ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನೊಂದು ಪ್ರಕರಣದಲ್ಲಿ
20ನೇ ವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪತ್ನಿಗೆ ನೀಡುವಂತೆ ಚಾಂದ್ ಕೊಟ್ಟೂರ ಕಳೆದ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಟಿಕೆಟ್ ಕೊಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಕೆ.ಎಚ್.ಪಾಟೀಲ್ ಅವರ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಚಾಂದ್ ಕೊಟ್ಟೂರ ಅವರು ಧರಣಿ ನಡೆಸುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಅಬ್ಬಿಗೇರಿ, ಶಹಬಾಜ್ ಮುಲ್ಲಾ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ನಲ್ಲಿ 35 ವಾರ್ಡ್ಗಳಲ್ಲಿ 100ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾದಂತಿದೆ. ಇದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೈ ನಾಯಕರಿಗೆ ಟಿಕೆಟ್ ಹಂಚಿಕೆ ಮುನ್ನವೇ ಅಸಮಾಧಾನದ ಬಿಸಿ ತಟ್ಟುತ್ತಿದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದರೆ, ಅಸಮಾಧಾನ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿದ್ದು, ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ಕಂಟಕವಾಗಿ ಪರಿಣಮಿಸಬಾರದೆಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದ್ದು, ಟಿಕೆಟ್ ಹಂಚಿಕೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.