ವಿಜಯಸಾಕ್ಷಿ ಸುದ್ದಿ, ಧಾರವಾಡ
ಮುಂದೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರು ಕೈ ಎತ್ತಿ ಹಿಡಿದಿದ್ದರು. ಆದರೆ, ಈಗ ಅವರೇ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕಿತ್ತಾಡುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್‌ನವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ಸಿನ ಹಣೆಬರಹವೇ ಇಷ್ಟು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಆ ಪಕ್ಷಕ್ಕೆ ಬಹುಮತ ಇಲ್ಲ. ಈ ರೀತಿ ಕಿತ್ತಾಡುವುದನ್ನು ಬಿಟ್ಟು ಕೊರೊನಾದ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ಕೊಡಬೇಕು ಎಂದರು.
ಕೊರೊನಾ ಮೂರನೇ ಅಲೆ ಸಂಬಂಧ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಜಿಲ್ಲಾವಾರು ಸಭೆಗಳನ್ನು ನಡೆಸಿ ಅದರ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ದೇವಶೆಟ್ಟಿ ಅವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಆ ವರದಿ ಆಧಾರದ ಮೇಲೆ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಶೆಟ್ಟರ್ ತಿಳಿಸಿದರು.
ಇನ್ನು ಶಾಸಕ ಅರವಿಂದ ಬೆಲ್ಲದ ಹಾಗೂ ನಿಮ್ಮ ಮಧ್ಯೆ ಮನಸ್ತಾಪವಿದೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಚಿವ ಶೆಟ್ಟರ್, ನೀವು ಅವರನ್ನೇ ಕೇಳಿ, ಇಂತಹ ಸಣ್ಣ ಸಣ್ಣ ವಿಚಾರಗಳನ್ನು ನನಗೆ ಕೇಳಿದರೆ ಹೇಗೆ ಎಂದು ಹೇಳಿ ಹೊರಟು ಹೋದರು.