ಕಾಣದಂತೆ ಮಾಯವಾದನೊ..

0
Spread the love

ಬಾರದೂರಿಗೆ ಪುನೀತ್ ಪಯಣ

Advertisement

ಸಿನಿಮಾ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಅಪ್ಪು

ಥೇಟ್ ಅಪ್ಪನಂತೆ ಬಡವರ ಬಂಧುವಾಗಿದ್ದ ಲೋಹಿತ್

ಬಸವರಾಜ ಕರುಗಲ್.
ವಿಜಯಸಾಕ್ಷಿ ಸುದ್ದಿ, ಬೆಂಗಳೂರು: 2021ರ ಅಕ್ಟೋಬರ್ 29 ಕರುನಾಡಿಗೆ ದಿಗ್ಭ್ರಮೆ ಮೂಡಿಸಿದ ಮತ್ತೊಂದು ದಿನ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಠಾತ್ ಪಯಣ ಬೆಳೆಸಿದ ಕೆಟ್ಟ ದಿನ.

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ ಚಿನ್ನದ ಹೃದಯ ಹೊಂದಿದ್ದ ಅಪ್ಪಟ ಅಪರಂಜಿ ಅಪ್ಪು.
1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನ್ಮ ತಾಳಿದ ಪುನೀತ್, ಆರು ತಿಂಗಳಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು.

ರಾಜ್ ದಂಪತಿಯ ಕಿರಿ ಮಗುನಾಗಿದ್ದರಿಂದ ಹೆಚ್ಚು ಪ್ರೀತಿಯಲ್ಲೇ ಬೆಳೆದರೂ ಅಮ್ಮ ಮಾತ್ರ ಕಟ್ಟು ನಿಟ್ಟು, ಶಿಸ್ತನ್ನು ಮಕ್ಕಳಲ್ಲಿ ಬೆಳೆಸಿದರು. ರಾಜ್ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದುದರಿಂದ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಇದುವರೆಗೂ ಸುಮಾರು 39ಕ್ಕೂ ಅಧಿಕ ಸಿನಿಮಾಗಳಲ್ಲಿ ( ಅತಿಥಿ ಪಾತ್ರಗಳನ್ನೂ ಸೇರಿಸಿ) ಅಭಿನಯಿಸಿದ್ದಾರೆ. ಇತ್ತಿಚೆಗೆ ತಮ್ಮದೇ ಪ್ರೋಡಕ್ಷನ್ ಹೌಸ್ ಆರಂಭಿಸಿ ಮಾಯಾಬಜಾರ್ ಹಾಗೂ ಫ್ರೆಂಚ್ ಬಿರಿಯಾನಿ ಎಂಬ ಎರಡು ಸಿನಿಮಾಗಳನ್ನು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ನಿರ್ಮಾಣವಾಗುವ ಹಂತದಲ್ಲಿದ್ದು, ಒಂದರಲ್ಲಿ ಅವರೇ ಅಭಿನಯಿಸಬೇಕಿತ್ತು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡಲಿಲ್ಲ.

ಬರೀ ನಟನೆ, ನಿರ್ಮಾಣ ಮಾತ್ರವಲ್ಲದೇ, ಹಾಡುವಿಕೆಯಲ್ಲೂ ಪುನೀತ್ ಮೇಲುಗೈ ಸಾಧಿಸಿದ್ದರು. ರಾಜ್ ಹಾಗೂ ಶಿವಣ್ಣ, ರಾಘಣ್ಣ ಜೊತೆ ದೇವರ ಹಾಡುಗಳು ಸೇರಿದಂತೆ 150ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇತ್ತಿಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ರತ್ನನ್ ಪ್ರಪಂಚ ಸಿನಿಮಾದಲ್ಲೂ ಉತ್ತರ ಕರ್ನಾಟಕ ಭಾಷೆಯ ಗಿಚ್ ಗಿಲಿಗಿಲಿ ಹಾಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.

ಬಾಲ್ಯದಲ್ಲೇ ರಾಜ್ಯ ಪ್ರಶಸ್ತಿ (ಚಲಿಸುವ ಮೋಡಗಳು) ಹಾಗೂ ರಾಷ್ಟ್ರ ಪ್ರಶಸ್ತಿ (ಬೆಟ್ಟದ ಹೂವು) ಗಳನ್ನು ಮುಡಿಗೇರಿಸಿಕೊಂಡ ರಾಜರತ್ನ ಅಪ್ಪು ಜನಪ್ರಿಯತೆಯನ್ನು ನೆತ್ತಿಗೇರಿಸಿಕೊಂಡವರಲ್ಲ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕನಟರಾಗಿ ಮತ್ತೇ ಬಣ್ಣದ ಲೋಕ ಯಾನ ಆರಂಭಿಸಿದ ಪುನೀತ್ ಹಿಂತಿರುಗಿ ನೋಡಲೇ ಇಲ್ಲ. ಪುನೀತ್ ಸಿನಿಮಾಗಳ ಸಕ್ಸಸ್ ರೇಟ್ 80%.

ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಪಟ್ಟಣದ ಜನ ಕೃಷಿ ಕಡೆ ಮುಖ ಮಾಡಿದ್ದನ್ನ ಕೇಳಿದ್ದೇವೆ. ಅದೇ ರೀತಿ ಪೃಥ್ವಿ ಸಿನಿಮಾದಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸಿದ್ದ ಪುನೀತ್ ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅನೇಕರು ಪೃಥ್ವಿ ಸಿನಿಮಾ ಪುನೀತ್‌ರಂತೆ ಜಿಲ್ಕಾಧಿಕಾರಿಯಾಗಬೇಕು ಎಂದು ಹೇಳಿಕೊಂಡದ್ದು ಉಂಟು.

ಪುನೀತ್ ಸಿನಿಮಾಗಳೆಂದರೆ ಫ್ಯಾಮಿಲಿ ಆಡಿಯನ್ಸ್ ಮೂವಿ ಅನ್ನೋದರಲ್ಲಿ ಅನುಮಾನಾನೇ ಇಲ್ಲ. ಬಾಲ್ಯದಲ್ಲೇ ಐತಿಹಾಸಿಕ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದ ಮಾಸ್ಟರ್ ಲೋಹಿತ್ ಬೆಟ್ಟದ ಹೂವು ಸಿನಿಮಾ ಮೂಲಕ ಪುನೀತ್ ಆದರು. ಅಪ್ಪು ಸಿನಿಮಾ ಮೂಲಕ ನಾಯಕನಾಗಿ ಸಾಮಾಜಿಕ, ಆ್ಯಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾ ಜಾನರ್‌ಗಳಲ್ಲಿ ನಟಿಸಿರುವ ಪುನೀತ್ ಸದಾ ನಿರ್ಮಾಪಕರ ಹಿತ ಕಾಯುವ ನಟರಲ್ಲೊಬ್ಬರಾಗಿದ್ದರು.

ತ್ರಿಮೂರ್ತಿಗಳ ಸಂಗಮ:
ರಾಜ್ ಬದುಕಿದ್ದಾಗಲೇ ರಾಜ್ ಹಾಗೂ ಪುತ್ರರು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಬಯಕೆ ಮೊದಲಿನಿಂದಲೂ ಇತ್ತಾದರೂ ಅದು ನನಸಾಗಲಿಲ್ಲ. ಇತ್ತಿಚೆಗೆ ಶಿವಣ್ಣ ಹಾಗೂ ಪುನೀತ್ ಅಭಿನಯದ ಸಿನಿಮಾ ಫೈನಲ್ ಆಗಿತ್ತಾದರೂ ಸೆಟ್ಟೇರಲೇ ಇಲ್ಲ.
ರಾಜಣ್ಣ-ಶಿವಣ್ಣ-ಪುನೀತ್ ಒಟ್ಟಿಗೆ ಅಭಿನಯಿಸಿದ್ದ ಸಿನಿಮಾ ಅಂದ್ರೆ ಅದು 1988ರಲ್ಲಿ ತೆರೆ‌ಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’.

ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ:
ಪುನೀತ್ ಓದಿದ್ದು 10ನೇ ತರಗತಿಯಾದರೂ ನಾಯಕರಾಗಿ ಪರಿಚಯವಾದ ನಂತರ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತರು. ಇಂದು ಐಎಎಸ್/ಕೆಎಎಸ್ ಮಾಡಲು ಸಾಕಷ್ಟು ಸ್ಪರ್ಧೆ ಇರುವುದರಿಂದ ತಂದೆಯ ಹೆಸರು, ನೆನಪಿನಲ್ಲಿ ತರಬೇತಿ ಸಂಸ್ಥೆಯನ್ನು ಪುನೀತ್ ಆರಂಭಿಸಿದ್ದರು. ಇತ್ತಿಚೆಗೆ ಶೈಕ್ಷಣಿಕ ಆ್ಯಪ್‌ವೊಂದನ್ನ ಕನ್ನಡಿಗರಿಗೆ ಪರಿಚಯಿಸಿದ್ದ ಪುನೀತ್ ಸಿಎಂ ಬಸವರಾಜ ಬೊಮ್ಮಾಯಿ ಅದನ್ನ ಲೋಕಾರ್ಪಣೆ ಮಾಡಿದ್ದರು.

ತಮಿಳು ಸಿನಿಮಾ ಮೇಕಿಂಗ್‌‌ನ್ನ ಬಹುವಾಗಿ ಮೆಚ್ಚುತ್ತಿದ್ದ ಪುನೀತ್ ಹುಡುಗ್ರು ಸಿನಿಮಾ ಆ ರೇಂಜ್‌ನಲ್ಲಿತ್ತು ಎಂದು ಹಲವು ಕಡೆ ಹೇಳಿಕೊಂಡಿದ್ದರು.‌ ಆ್ಯಕ್ಷನ್ ಬಗ್ಗೆ ಒಲವಿದ್ದ ಅವರು ಇಂಗ್ಲಿಷ್ ಸಿನಿಮಾಗಳನ್ನು ಜಾಸ್ತಿ ನೋಡುತ್ತಿದ್ದರು. ತಮಿಳು, ಇಂಗ್ಲಿಷ್ ಸಿನಿಮಾಗಳನ್ನು ತಮ್ಮದೇ ಪ್ರೋಡಕ್ಷನ್ ಹೌಸ್‌ನಲ್ಲಿ ನಿರ್ಮಾಣ ಮಾಡುವ ಇಂಗಿತ ಅವರಲ್ಲಿತ್ತು.

ಬಡವರ ಬಂಧುವಾಗಿದ್ದ ರಾಜಕುಮಾರ:
ಪುನೀತ್ ಸಿರಿತನವನ್ನು ಅನುಭವಿಸಿದ್ದರೂ ತಂದೆಯಿಂದ ಬಡತನದ ಬೇಗುದಿ ಎಂಥದ್ದು ಎಂಬುದನ್ನು ಅರಿತವರು. ಹಾಗಾಗಿ ಅವರು ಯಾವುದೇ ಭಾಗಕ್ಕೆ ಚಿತ್ರೀಕರಣಕ್ಕೆ ಹೋದರೂ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದರು. ಬಡವ-ಬಲ್ಲಿದ ಎಂಬ ಬೇಧವಿಲ್ಲದೇ ಅವರೊಟ್ಟಿಗೆ ಊಟ ಮಾಡುತ್ತಿದ್ದರು. ಅಲ್ಲಿನ ಜನಜೀವನ ಅರಿತು, ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಸಹಾಯ ಹಸ್ತ ಚಾಚುವ ನಿಷ್ಕಲ್ಮಶ ಮನಸಿನ ಯುವರತ್ನ.

ಕೊಪ್ಪಳ ಜಿಲ್ಲೆಯ ಗಂಗಾವತಿ ಸುತ್ತಮುತ್ತ ಅವರ ಅಭಿನಯದ ಜೇಮ್ಸ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ ಪೊಲೀಸರ ಮನವಿ ಮೇರೆಗೆ ಏನನ್ನೂ ನಿರೀಕ್ಷೆ ಮಾಡದೇ ಕೊರೊಬಾ ಕುರಿತು ಜಾಗೃತಿ ಮೂಡಿಸಿದ್ದರು. ಗಂಗಾವತಿ ತಾಲೂಕಿನ ಮಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ನಾಡಿನ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳಿಗೆ ಅವರ ಕೊಡುಗೆ ಅನನ್ಯ. ಆದರೆ ಎಲ್ಲೂ ಈ ಬಗ್ಗೆ ಅವರು ಹೇಳಿಕೊಂಡಿಲ್ಲ.

ಬಾರದೂರಿಗೆ ಪಯಣ ಬೆಳೆಸಿದ ಪುನೀತ್ ಆಕಾಶದಲ್ಲಿ‌ ಮಿನುಗುತ್ತಿರುವ ನಕ್ಷತ್ರಗಳಲ್ಲಿ ಒಂದಾಗಿದ್ದಾರೆ. ಅವರ ಅಗಲಿಕೆ ನಿಜಕ್ಕೂ ಅರಗಿಸಿಕೊಳ್ಳುವಂಥಲ್ಲ. ಮತ್ತೊಂದು ಜನ್ಮವಿದ್ದರೆ ನೀವು ಮತ್ತೇ ಕರುನಾಡಿನ ಪವರ್ ಸ್ಟಾರ್ ಆಗಿಯೇ ಹುಟ್ಟಿ ಬನ್ನಿ ಪುನೀತ್..


ಬಾಲ ನಟನಾಗಿ ಪುನೀತ್ ಸಿನಿಮಾಗಳು
1.ಪ್ರೇಮದ ಕಾಣಿಕೆ
2.ಭಾಗ್ಯವಂತ
3.ಎರಡು ನಕ್ಷತ್ರಗಳು
4.ಬೆಟ್ಟದ ಹೂವು
5.ಚಲಿಸುವ ಮೋಡಗಳು
6.ಶಿವ ಮೆಚ್ಚಿದ ಕಣ್ಣಪ್ಪ
7.ಪರಶುರಾಮ್
8.ಯಾರಿವನು
9.ಭಕ್ತ ಪ್ರಹ್ಲಾದ
10.ವಸಂತ ಗೀತ

ನಾಯಕನಟನಾಗಿ ಪುನೀತ್ ಸಿನಿಮಾಗಳು

1.ಅಪ್ಪು
2.ಅಭಿ

  1. ವೀರ ಕನ್ನಡಿಗ
    4.ಮೌರ್ಯ
    5.ಆಕಾಶ್
    6.ನಮ್ಮ ಬಸವ
  2. ಅಜಯ್
    8.ಅರಸು
    8.ಮಿಲನ
    10.ಬಿಂದಾಸ್
    11.ವಂಶಿ
  3. ರಾಜ್ ದ ಶೋಮ್ಯಾನ್
    13.ಪೃಥ್ವಿ
    14.ರಾಮ್
    15.ಜಾಕಿ
    16.ಹುಡುಗರು
    17.ಪರಮಾತ್ಮ
    18.ಅಣ್ಣ ಬಾಂಡ್
    19.ಯಾರೇ ಕೂಗಾಡಲಿ
  4. ನಿನ್ನಿಂದಲೇ
  5. ಮೈತ್ರಿ
  6. ಪವರ್
  7. ಧೀರ ರಣ ವಿಕ್ರಮ
  8. ಚಕ್ರವ್ಯೂಹ
    25 ದೊ‍ಡ್ಮನೆ ಹುಡುಗ
    26.ರಾಜಕುಮಾರ
  9. ಅಂಜನಿ ಪುತ್ರ
  10. ನಟಸಾರ್ವಭೌಮ
  11. 29.ಯುವರತ್ನ

Spread the love

LEAVE A REPLY

Please enter your comment!
Please enter your name here