//ಬೋಗಸ್ ಬಿಲ್//
-ಲಕ್ಷಾಂತರ ರೂಪಾಯಿ ಗುಳುಂಸ್ವಾಹಾ ಮಾಡಿರುವ ಆರೋಪ
-ಸರಕಾರದ 11.50 ಲಕ್ಷ ರೂಪಾಯಿ ದುರ್ಬಳಕೆಗೆ ಸದಸ್ಯೆಯ ಕಿಡಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ ಪ್ರಬಾರಿ ಪಿಡಿಓ ಆಗಿದ್ದ ದೊಡ್ಡಬಸಮ್ಮ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರ್ಗವ್ವ ದೂಪಂ ಸೇರಿಕೊಂಡು ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಸರಕಾರದ 11.50 ಲಕ್ಷ ರೂಪಾಯಿ ಗುಳುಂ ಸ್ವಾಹಾ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯೆ ಲಕ್ಷ್ಮೀ ದಾಸರ್ ಹಾಗೂ ಅವರ ಪತಿ ವಿಜಯಕುಮಾರ್ ದಾಸರ್ ಆರೋಪಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಹಾಗೂ ನರೇಗಾ ಯೋಜನೆಯಡಿ ಬೋಗಸ್ ಬಿಲ್ ಸೃಷ್ಟಿಸಿ, ಸುಮಾರು 11.50 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕೂಡಲೇ ಪಿಡಿಒ ದೊಡ್ಡಬಸಮ್ಮ ಅವರನ್ನು ಅಮಾನತುಗೊಳಿಸಿ ಗ್ರಾಪಂ ಅಧ್ಯಕ್ಷೆ ದುರ್ಗವ್ವ ಇವರನ್ನು ಅಧ್ಯಕ್ಷೆ ಸ್ಥಾನದಿಂದ ಅನರ್ಹಗೊಳಿಸುವಂತೆ ಅವರು ಒತ್ತಾಯಿಸಿದರು.
ಪ್ರಭಾರಿ ಪಿಡಿಓ ಆಗಿದ್ದ ದೊಡ್ಡಬಸಮ್ಮ ಸದ್ಯ ತಮ್ಮ ನಿಯೋಜಿತ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ಕುದರಿಮೋತಿ ಗ್ರಾಪಂಗೆ ಬೇರೊಬ್ಬ ಪಿಡಿಓ ಬಂದಿದ್ದಾರೆ. ಸದ್ಯದ ಪಿಡಿಓ ದಾಖಲಾತಿಗಳನ್ನು ಪರಿಶೀಲಿಸಿ ಖೊಟ್ಟಿ ದಾಖಲೆ ಸೃಷ್ಟಿಸಿರುವುದಾಗಿ ತಿಳಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ ಯಾವುದೇ ಸಲಕರಣೆ ಖರೀದಿಸಿಲ್ಲ ಎಂದು ಲಿಖಿತವಾಗಿ ಪತ್ರ ನೀಡಿದ್ದಾರೆ. ಕುಡಿಯುವ ನೀರಿಗಾಗಿ ಮೋಟಾರ್ ಹಾಗೂ ಪಂಪ್ ಖರೀದಿಸಲಾಗಿದೆ ಎಂದು ಹಿಂದಿನ ಪಿಡಿಒ 2 ಲಕ್ಷ ರೂಪಾಯಿ ಖರ್ಚು ಹಾಕಿದ್ದಾರೆ. ಒಂದೇ ಒಂದು ಸಲಕರಣೆಯನ್ನು ಅವರು ಖರೀದಿಸಿಲ್ಲ ಎಂದು ವಿಜಯಕುಮಾರ್ ತಿಳಿಸಿದರು.
ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಫೋಟೋಸಮೇತ ವರದಿಯಲ್ಲಿ ತಿಳಿಸಿದ್ದಾರೆ. ಹಿಂದೆ ನಿರ್ಮಾಣ ಮಾಡಿದ್ದ ಬದುವನ್ನೇ ಈಗ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಕೃಷಿ ಹೊಂಡ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿಗಳಲ್ಲೂ ನರೇಗಾ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಅವರು ಕಿಡಿ ಕಾರಿದರು.
ಈ ಬಗ್ಗೆ ಉಳಿದ ಸದಸ್ಯರು ಪ್ರಶ್ನಿಸುತ್ತಿಲ್ಲ. ಸುಮ್ಮನೆ ಯಾಕೆ ವಿರೋಧ ಕಟ್ಟಿಕೊಳ್ಳಬೇಕು ಎಂಬ ಧೋರಣೆಯಲ್ಲಿ ಕಾಲ ತಳ್ಳುತ್ತಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದು ಎಂಬ ಸದುದ್ದೇಶದಿಂದ ಕುದರಿಮೋತಿ ಗ್ರಾಪಂ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಮುಂದಾಗಿರುವುದಾಗಿ ತಿಳಿಸಿದ ಅವರು, ಈಗಾಗಲೇ ತಾಪಂ ಇಓ ಅವರಿಗೂ ದೂರು ಸಲ್ಲಿಸಲಾಗಿದ್ದು, ಅವರೂ ಸಹ ಉದಾಸೀನ ತೋರಿದ್ದಾರೆ ಎಂದು ದೂರಿದರು.