ವಿಜಯಸಾಕ್ಷಿ ಸುದ್ದಿ, ಮೈಸೂರು
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಶಾಸಕ ಎಚ್. ವಿಶ್ವನಾಥ್ ಒತ್ತಾಯ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ಅಕ್ಷರ, ಆರೋಗ್ಯ ಎರಡೂ ಹಾಳಾಗಲಿದೆ. ಪರೀಕ್ಷೆಯಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಜುಲೈನಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವೇ ಸಿಬಿಎಸ್ ಇಯಲ್ಲಿ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂದು ಆದೇಶಿಸಿದೆ. ಆದರೂ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಲೆ ಬಾಗಿದೆ. ಕೋವಿಡ್ ಆತಂಕದ ಜೊತೆಗೆ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿ ಹೋಗಿದೆ. ಪರೀಕ್ಷೆ ನಡೆಸಲು ಹೊರಟಿರುವುದು ಆತುರ, ಅವೈಜ್ಞಾನಿಕ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಪಾಠವನ್ನೇ ಮಾಡದೆ ಪರೀಕ್ಷೆ ಮಾಡುವುದು ಅವೈಜ್ಞಾನಿಕವಾದುದು. ಅವೈಜ್ಞಾನಿಕ ತೀರ್ಮಾನವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ರಾಜ್ಯದಲ್ಲಿ ಯಾವ ಪುರುಷಾರ್ಥಕ್ಕೆ ಪರೀಕ್ಷೆ ನಡೆಸಲು ಸರ್ಕಾರ ಹೊರಟಿದೆ. ಜೀವ ಮತ್ತು ಜೀವನ ಎರಡನ್ನು ತೆಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿ ಮೋದಿ ಜೀವ ಮುಖ್ಯ ನಂತರ ಜೀವನ ಅಂತ ಎಂದು ಹೇಳಿದ್ದಾರೆ. ಆದರೆ, ಸುರೇಶ್ ಕುಮಾರ್ ಗೆ ನನಗೆ ಎಲ್ಲವೂ ಗೊತ್ತು ಎಂಬ ಇಗೋ ಇದೆ. ಈ ಇಗೋ ಇಂತಹ ಸಂದರ್ಭದಲ್ಲಿ ಬಳಕೆಯಾಗಬಾರದು ಎಂದು ಕಿಡಿಕಾರಿದ್ದಾರೆ.