ಹಿರೇನಂದಿಹಾಳ ಗ್ರಾಮದ ಈರಪ್ಪ ಹಣಮಪ್ಪ ಕಲಗುಡಿ ವಿರುದ್ಧ ಗಜೇಂದ್ರಗಡ ಠಾಣೆಯಲ್ಲಿ ದೂರು ದಾಖಲು
ವಿಜಯಸಾಕ್ಷಿ ಸುದ್ದಿ, ಗದಗ
ಕೆಎಸ್‌ಆರ್‌ಟಿಸಿಯಲ್ಲಿ ಅಸಿಸ್ಟಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ನೇಮಕಾತಿಯ ನಕಲಿ ಪ್ರಮಾಣ ಪತ್ರ ನೀಡಿ ವಂಚನೆ ಮಾಡಿದ ಕುರಿತು ಗಜೇಂದ್ರಗಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಈರಪ್ಪ ಉರ್ಫ್ ವೀರೇಶ ಹಣಮಪ್ಪ ಕಲಗುಡಿ ಆರೋಪಿಯಾಗಿದ್ದು, 7 ಜನರಿಂದ 30 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ವಂಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಕಳಕಪ್ಪ ಈಶಪ್ಪ ಅಂಗಡಿ ಕೆಎಸ್‌ಆರ್‌ಟಿಸಿಯಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಲಾಖೆಯಲ್ಲಿ ನನಗೆ ಪರಿಚಿತರಿದ್ದು, ನೌಕರಿ ಮಾಡಿಸಿಕೊಡುವುದಾಗಿ ನಂಬಿಸಿ ಆರೋಪಿ ವೀರೇಶ 2019ರ ಡಿಸೆಂಬರ್ 15ರಂದು ಅಡ್ವಾನ್ಸ್ ಎಂದು 2 ಲಕ್ಷ ರೂ., 2020ರಲ್ಲಿ 6 ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ರೂಪಾಯಿ ನಗದು ಪಡೆದುಕೊಂಡಿದ್ದಾನೆ.
ನೌಕರಿ ಬಗ್ಗೆ ಕೇಳಿದಾಗ ಲಾಕ್ಡೌನ್ ಇದ್ದು, ಇನ್ನಷ್ಟು ದಿನ ಕಾಯುವಂತೆ ತಿಳಿಸಿದ್ದಾನೆ. ಸುಮಾರು ನಾಲ್ಕು ತಿಂಗಳು ಕಳೆದ ಬಳಿಕ ಆರೋಪಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಗ್ರಾಮ ಹಿರೇನಂದಿಹಾಳ ಗ್ರಾಮಕ್ಕ ತೆರಳಿ ಆರೋಪಿಯ ಮನೆಗೆ ಹೋಗಿ ವಿಚಾರಿಸಿದಾಗ ಆತ ಬೆಂಗಳೂರಿಗೆ ತೆರಳಿದ್ದಾನೆ ಎಂದು ತಿಳಿಸಿದ್ದಾರೆ.
ವಂಚನೆ ಆಗಿರುವುದು ಗೊತ್ತಾಗಿ ಕಲ್ಲಪ್ಪ ಅಂಗಡಿ ಗಜೇಂದ್ರಗಡ ಠಾಣೆಗೆ ತೆರೆಳಿ ವಂಚನೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿ ಇದೇ ರೀತಿ ಇನ್ನೂ ಆರು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಪರಶುರಾಮ ಕಲ್ಲಪ್ಪ ಹೊಸೂರು ಇವರಿಂದ 2019-20ನೇ ಸಾಲಿನಲ್ಲಿ ೬ ಲಕ್ಷ ರೂ., ರೋಣ ತಾಲೂಕಿನ ಇಟಗಿ ಗ್ರಾಮದ ಸಚಿನ ಧರ್ಮಪ್ಪ ಜಡೆದಲಿ ಎಂಬುವವರಿಂದ 6 ಲಕ್ಷ ರೂ., ಇದೇ ಗ್ರಾಮದ ಶಿವಕುಮಾರ ಭೀಮಪ್ಪ ಜಡೆದಲಿ ಎಂಬುವವರಿಂದ 1 ಲಕ್ಷ ರೂ., ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗಾಣದಾಳ ಗ್ರಾಮದ ಈರಯ್ಯ ವಿರೂಪಾಕ್ಷಯ್ಯ ಅವತಾರಿ 2 ಲಕ್ಷ ರೂ. ನಗದು, 4 ಲಕ್ಷ ರೂ. ಫೋನ್ ಪೇ ಮೂಲಕ , ಗಜೇಂದ್ರಗಡ ತಾಲೂಕಿನ ದಿಂಡೂರ ಗ್ರಾಮದ ಭರಮಪ್ಪ ಹುಚ್ಚಪ್ಪ ಚೌಧರಿ ಎಂಬುವವರಿಂದ 1 ಲಕ್ಷ ರೂ.ಗಳನ್ನು ಪಡೆದುಕೊಂಡು ಬಳಿಕ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಇವರೂ ವೀರೇಶ ಹಾಗೂ ಸಂಗಡಿಗರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.