ಶಿಂಧೆಯಿಂದ ಎಷ್ಟೇ ಹಣ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ
ವಿಜಯಸಾಕ್ಷಿ ಸುದ್ದಿ, ಗದಗ
ದೊಡ್ಡ ದೊಡ್ಡ ಕುಳಗಳಿಂದ ಹಿಡಿದು ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಪಾಯಿ ವ್ಯಕ್ತಿಗಳನ್ನೂ ಒಳಗೊಂಡು ಕೋಟ್ಯಂತರ ರೂಪಾಯಿಗಳ ವಂಚನೆ ಆರೋಪ ಹೊತ್ತು ಜೈಲು ಸೇರಿದ್ದ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಮಾಲೀಕ, ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ರಾಘವೇಂದ್ರ ಶಿಂಧೆಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.
ಈ ಕುರಿತು ಬುಧವಾರ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ಪ್ರಸ್ತುತ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಮನವಿಯನ್ನು ಕಳಿಸಿದ್ದೆವು. ಅದರಂತೆ ಆಗಸ್ಟ್ 10ರಂದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಮಾನ್ಯ ಡಿಐಜಿಯವರು ತಿಳಿಸಿದ್ದಾರೆ.
ಆರೋಪಿ ಶಿಂಧೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸುಮಾರು 36 ಹೂಡಿಕೆದಾರರಿಂದ 10 ಕೋಟಿ.ರೂ.ಗಳಿಗೂ ಮೀರಿ ಮೋಸ ನಡೆಸಿರುವ ವಿಚಾರ ತಿಳಿದುಬಂದಿತ್ತು. ಬಡ್ಸ್ ಕಾಯ್ದೆಯ ಪ್ರಕಾರ ತನಿಖೆ ನಡೆಸಿ, ಮೋಸ ಮಾಡಿ ಸಂಗ್ರಹಿಸಿದ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ವಿವರವನ್ನು ಸಲ್ಲಿಸಲಾಗಿತ್ತು.
ಈ ತನಿಖೆಯಲ್ಲಿ ಸುಮಾರು 4 ಕೋಟಿ.ರೂ ಸರ್ಕಾರಿ ಮೌಲ್ಯವಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಈವರೆಗಿನ ತನಿಖೆಯ ವಿವರಗಳನ್ನೂ ಸಿಐಡಿಗೆ ಒದಗಿಸಿದ್ದೇವೆ ಎಂದರು.
ಹತ್ತು ಕೋಟಿ.ರೂ ಮೇಲ್ಪಟ್ಟ ಈ ವಿಧದ ಮೋಸದ ಪ್ರಕರಣಗಳನ್ನು ಸಿಐಡಿಗೆ ವಹಿಸಬೇಕೆಂಬ ಕಾನೂನಿದೆ. ಶಿಂಧೆ ಪ್ರಕರಣದಲ್ಲಿ ತನಿಖೆ ನಡೆಸಿದಷ್ಟೂ ಮೋಸದ ವ್ಯವಹಾರಗಳು ಹೊರಬರುತ್ತಿದ್ದು, ಮೋಸವಾದ ಹಣದ ಮೊತ್ತ ಇನ್ನೂ ಹೆಚ್ಚಾಗುತ್ತಲೇ ಇದೆ. ಸ್ಪಷ್ಟ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ. 2-3 ಲಕ್ಷದಂತೆ ಬಹಳಷ್ಟು ಜನ ಈತನಲ್ಲಿ ಹಣ ಹೂಡಿದವರಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಹಲವಾರು ಜನ ಹಣ ಕಳೆದುಕೊಂಡು ಮೋಸ ಹೋಗಿದ್ದು ಗೊತ್ತಾಗಿದೆ. ಆದರೆ ಅವರು ಯಾರೂ ಮುಂದೆ ಬಂದು ದೂರು ಕೊಡುತ್ತಿಲ್ಲ. ಮೋಸ ಹೋದವರು ಸಾಕ್ಷಿ ಸಮೇತ ದೂರು ನೀಡಬೇಕು. ಅವರಲ್ಲಿ ಸೂಕ್ತ ಸಾಕ್ಷಾಧಾರಗಳಿದ್ದರೆ, ದಾಖಲೆಗಳಿದ್ದರೆ ಧೈರ್ಯದಿಂದ ಮುಂದೆ ಬಂದು ದೂರು ಸಲ್ಲಿಸಬಹುದು. ಯಾವ ಕಾರಣಕ್ಕಾಗಿ ಹಣ ಕೊಟ್ಟಿದ್ದಾರೆ ಎಂಬುದಕ್ಕೆ ಅಗ್ರಿಮೆಂಟ್ ಏನಾದರೂ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೋಸ ಆಗಿದ್ದು ನಿಜವೇ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಸಿಐಡಿ ತನಿಖೆಯಲ್ಲಿ ಗಮನಕ್ಕೆ ತರಲಾಗುವುದು. ಒಟ್ಟಾರೆ ಎಲ್ಲದಕ್ಕೂ ಸಾಕ್ಷಿಗಳು ಮುಖ್ಯ.
–ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ
ಈತನಿಂದ ಎಷ್ಟೇ ಹಣ, ಬಂಗಾರ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ. ನಗದು ವ್ಯವಹಾರವಷ್ಟೇ ಅಲ್ಲದೆ ಬ್ಯಾಂಕ್, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆಗಳಾಗಿದ್ದರೂ, ಬೇರೆ ಯಾರಾದರೂ ವ್ಯಕ್ತಿಗಳ ಸಮ್ಮುಖದಲ್ಲಿ ಈತನಿಗೆ ಹೂಡಿಕೆಯ ಹಣ ನೀಡಿದ್ದರೂ ನಮ್ಮ ಗಮನಕ್ಕೆ ತನ್ನಿ. ದೂರುದಾರರಿಂದ ಸಂಪೂರ್ಣ ವಿವರ, ದಾಖಲೆಗಳು ಇನ್ನೂ ಬರಬೇಕಿದೆ ಎಂದು ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.
ವಿಚಾರಣೆ ನಡೆಸಿದಾಗ ಇನ್ನೂ ಬಹಳಷ್ಟು ಜನರಿಗೆ ನಿವೇಶನ, ಮನೆ ಕೊಡಿಸುತ್ತೇನೆ, ಅದು ಬೇಡವಾದರೆ ಅಧಿಕ ಬಡ್ಡಿಯೊಂದಿಗೆ ನಿಮ್ಮ ಹಣವನ್ನು ಮರಳಿಸುತ್ತೇನೆ ಎಂದು ಮೋಸ ಮಾಡಿರುವ ಬಗ್ಗೆ ತಿಳಿದುಬಂದಿತ್ತು. ಶಿಂಧೆಯ ವಿರುದ್ಧ ನ್ಯಾಯಾಲಯದ ಪರವಾನಗಿಯೊಂದಿಗೆ 21 ಬಡ್ಸ್ ಕಲಂನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಕಾನೂನಿನಂತೆ ಸದರಿ ಪ್ರಕರಣದಲ್ಲಿ ಮೋಸವಾದ ಹಣ, ಆಸ್ತಿ-ಪಾಸ್ತಿಯ ಮೌಲ್ಯ 10 ಕೋಟಿ.ರೂ ಮೀರಿರುವದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.
ನಗರದ ಸ್ಟೇಷನ್ ರಸ್ತೆಯ ನಗರಸಭೆ ಎದುರು ಕಚೇರಿ ತೆರದು ಫೈನಾನ್ಸ್ ದಂಧೆ ನಡೆಸುತ್ತಿದ್ದ ವಿಜಯ ಶಿಂಧೆ, ಅವಳಿ ನಗರದ ದೋ ನಂಬರ್ ದಂಧೆಕೋರರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಬಡ್ಡಿಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. 2020ರ ಅಕ್ಟೋಬರ್‌ನಿಂದ 2022ರ ಏಪ್ರಿಲ್ 23ರವರೆಗೆ ಈತ ಭಾರೀ ವಂಚನೆ ನಡೆಸಿದ್ದ. ಕಳಸಾಪೂರ ರಸ್ತೆಯ ಸಂತೋಷ ಪ್ರಭಾಕರ್ ಮುತಗಾರ ಎಂಬುವವರು ಸೈಬರ್ ಠಾಣೆಗೆ ವಂಚನೆಯ ದೂರು ದಾಖಲಿಸಿದಾಗ, ಜುಲೈ 17ರಂದು ಶಿಂಧೆಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದರು.
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com
Vijayasakshi Kannada Daily Newspaper Provide News On Gadag District Including Karnataka, India News In Kannada.
Contact-9448326533/9019256545
E-mail-vijayasakshidaily@gmail.com