ಕೋವಿಡ್ ಲಸಿಕೆ; ಉತ್ತರ ಕರ್ನಾಟಕದಲ್ಲಿಯೇ ಗದಗ ಜಿಲ್ಲೆ ಪ್ರಥಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಜಿಲ್ಲೆಯ ಕೋವಿಡ್ ಲಸಿಕೆಯ ಅಂಕಿ ಅಂಶಗಳಲ್ಲಿ ಅನುಮಾನ ಹುಟ್ಟಿಸಿರುವ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರ ನಿಗದಿ ಪಡಿಸಿರುವ ಗುರಿ ತಲುಪುವ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ಗದಗ ಶೇ.100ರಷ್ಟು ಗುರಿ ಸಾಧಿಸಿದೆ.

ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ಒಟ್ಟು 7,75,000 ಕೊವೀಡ್ ಮೊದಲ ಲಸಿಕೆಯ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಆರೋಗ್ಯ ಇಲಾಖೆ ಹಾಗೂ ಸಿಬ್ಬಂದಿ ಕೊರೊನಾ ಲಸಿಕಾ ಅಭಿಯಾನ ಪ್ರಾರಂಭದ ದಿನವಾದ ಜ. 16ರಿಂದ ನ. 25ರವರೆಗೆ 11 ತಿಂಗಳ ಕಾಲಾವಧಿಯಲ್ಲಿ ಮನೆ ಮನೆಗಳ ಭೇಟಿ, ಲಸಿಕಾ ಮೇಳದಂತಹ ಕಾರ್ಯಕ್ರಮಗಳ ಮೂಲಕ ಗುರಿ ತಲುಪಿದೆ.

ಆರೋಗ್ಯ ಇಲಾಖೆ ಶೇ. 100ರಷ್ಟು ಗುರಿ ಮುಟ್ಟಿದ್ದರೂ, ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಮೊದಲ ಲಸಿಕೆ ಪಡೆಯಲು ಬಾಕಿ ಇರುವವರ ಸಂಖ್ಯೆ ಅಧಿಕವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,27,696 ಜನರು ಕೋವಿಡ್ ಎರಡನೇ ಲಸಿಕೆ ಪಡೆದುಕೊಂಡಿದ್ದು, ಉಳಿದವರಿಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 5,76,395 ಪುರುಷರು, 6,25,675 ಮಹಿಳೆಯರು ಮೊದಲ ಮತ್ತು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ.

ಮೂರು ಕೇಸ್


ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 182 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ 39 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗೆ ಸೂಚಿಸಲಾಗಿದೆ.

ಪ್ರತಿದಿನ 1,200 ಜನರ ಸ್ವ್ಯಾಬ್ ಸಂಗ್ರಹಿಸಲಾಗುತ್ತಿದ್ದು, ಸಂಖ್ಯೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ 6ರಿಂದ 7 ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಜಗದೀಶ್ ನುಚ್ಚಿನ್ ತಿಳಿಸಿದರು.

ಡಾ| ನುಚ್ಚಿನ್ ಕಾರ್ಯವೈಖರಿಗೆ ಮೆಚ್ಚುಗೆ

ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕುವಲ್ಲಿ ಶೇ. 100ರಷ್ಟು ಗುರಿ ಸಾಧಿಸಿರುವ ಗದಗ ಜಿಲ್ಲೆಯ ಸಾಧನೆಯಲ್ಲಿ ಇಬ್ಬರು ಡಿಎಚ್‌ಒಗಳ ಪಾತ್ರವಿದ್ದು, ಇಬ್ಬರೂ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಡಿಎಚ್‌ಒ ಡಾ.ಸತೀಶ್ ಬಸರಿಗಿಡದ ಅವರು ರಜೆಗೆ ಹೋಗುವ ಮುನ್ನ ಗದಗ ಜಿಲ್ಲೆ ಶೇ. 80ರಷ್ಟು ಗುರಿ ಸಾಧಿಸಿತ್ತು. ಇಲಾಖೆಯ ಪ್ರಭಾರಿ ಡಿಎಚ್‌ಒ ಆಗಿ ಡಾ| ಜಗದೀಶ್ ನುಚ್ಚಿನ್ ಪ್ರಭಾರ ವಹಿಸಿಕೊಂಡು (ಅ. 26) ಒಂದೇ ತಿಂಗಳಲ್ಲಿ ಶೇ. 20ರಷ್ಟು ಜನರಿಗೆ ಲಸಿಕೆ ನೀಡುವ ಮೂಲಕ ಸರ್ಕಾರದ ಗುರಿ ತಲುಪಿದ್ದು, ನುಚ್ಚಿನ್ ಅವರ ಕಾರ್ಯವೈಖರಿಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರೋಗ್ಯ ಇಲಾಖೆ ಕೆಲಸ ಮಾಡಿದರೂ ಇನ್ನುಳಿದ ಇಲಾಖೆಗಳ ಸಹಕಾರದಿಂದಾಗಿ ಶೇ. 100ರಷ್ಟು ನಿಗದಿತ ಗುರಿ ತಲುಪವಲ್ಲಿ ಸಾಧ್ಯವಾಯಿತು. ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಒಂದು ಮತ್ತು ಎರಡನೇ ಹಂತದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.

ಡಾ| ಜಗದೀಶ್ ನುಚ್ಚಿನ್, ಪ್ರಭಾರಿ ಡಿಎಚ್‌ಒ

Spread the love

LEAVE A REPLY

Please enter your comment!
Please enter your name here