*ಅಧಿಕಾರಿಗಳಿಗೆ ಮೌಖಿಕ ಆದೇಶ!
ವಿಜಯಸಾಕ್ಷಿ ಸುದ್ದಿ, ಗದಗ:
ಪತ್ನಿಯರ ಹೆಸರಿನಲ್ಲಿ ಗಂಡಂದಿರು ಆಡಳಿತ ನಡೆಸೋದು ಹೊಸ ವಿಷಯವೇನಲ್ಲ. ಅಧಿಕಾರ ವಿಕೇಂದ್ರೀಕರಣ, ಮಹಿಳಾ ಮೀಸಲಾತಿ ಜಾರಿಗೆ ಬಂದ ಅನಂತರ ಮಹಿಳೆಯರಿಗೂ ಸಮಾನ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ಕೆಲವರು ತಮ್ಮ ಮನೆಯ ಮಹಿಳೆಯರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕಲ್ಪಿಸಿ ತಾವೇ ಅಧಿಕಾರ ಚಲಾಯಿಸುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ.
ಅದರಲ್ಲೂ ಬೇರೆಯವರ ಹೆಸರಲ್ಲಿ ರಾಜಕೀಯ ಮಾಡುವುದು, ತಾಯಿ ಹೆಸರಲ್ಲಿ ಮಗ, ಪತ್ನಿಯ ಅಧಿಕಾರದಲ್ಲಿ ಪತಿ ಹಸ್ತಕ್ಷೇಪ, ಆಡಳಿತ ನಡೆಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಇಂತಹದೇ ಒಂದು ಪ್ರಕರಣ ಗುರುವಾರ ಗದಗನಲ್ಲಿ ನಡೆದೇ ಹೋಯಿತು.
ಗದಗ-ಬೆಟಗೇರಿ ನಗರಸಭೆಯ 12ನೇ ವಾರ್ಡಿನ ಸದಸ್ಯೆಯಾಗಿ ಬಿಜೆಪಿಯ ವಿಜಯಲಕ್ಷ್ಮೀ ಶಶಿಧರ ದಿಂಡೂರ ಆಯ್ಕೆಯಾಗಿದ್ದಾರೆ. ಆದರೆ ಆಡಳಿತ ನಡೆಸೋದು ಮಾತ್ರ ಪತಿ ಶಶಿಧರ ಎಂಬುವುದು ಸ್ಥಳೀಯರ ಆರೋಪ. ಸಾರ್ವಜನಿಕರು ಅಷ್ಟೇ ಅಲ್ಲದೆ, ಕೆಲವು ಪ್ರಾಮಾಣಿಕ ಅಧಿಕಾರಿಗಳೂ ಶಶಿಧರ ದಿಂಡೂರ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
12ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳ ಹಿಂಡನ್ನು ಕರೆಯಿಸಿ ಕೆಲಸ ಮಾಡಲು ಮೌಖಿಕ ಆದೇಶ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಫೋಟೋ ಸಾಕ್ಷೀಕರಿಸಿದೆ. ಈ ಪೋಟೋದಲ್ಲಿ ಸದಸ್ಯೆ ವಿಜಯಲಕ್ಷ್ಮೀ ಅವರು ಕಾಣುತ್ತಿಲ್ಲ. ಆದರೆ, ಸ್ಥಳೀಯ ಜನರ ನಡುವೆ ಶಶಿಧರ ದಿಂಡೂರ ಸಾಹೇಬರು ಮಾತ್ರ ರಾರಾಜಿಸುತ್ತಿದ್ದಾರೆ.
ಇವರೊಂದಿಗೆ 24×7 ಕುಡಿಯುವ ನೀರು ಸರಬರಾಜು ಯೋಜನೆಯ ಅಧಿಕಾರಿಗಳಿದ್ದಾರೆ. ದಶಕದ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ ಮಾಡುವುದಾಗಿ ಎಇಇ ಸುಭಾಸ್ ಭಜ್ಜನವರ್ ಶಶಿಧರ ದಿಂಡೂರ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈ ರೀತಿ ಬೇರೆಯವರ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುವುದು ಸ್ಪಷ್ಟವಾಗಿರುವಂತೆ, ಪೌರಾಡಳಿತದಲ್ಲೂ ರೀತಿ ಹಸ್ತಕ್ಷೇಪ ಮಾಡುವಂತಿಲ್ಲ.
ಇದು ಒಂದೆಡೆಯಾದರೆ, ಗದಗ-ಬೆಟಗೇರಿ ನಗರಸಭೆಗೆ ಡಿ. 30ರಂದು ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದರೂ ಅಲ್ಲಿ ಇನ್ನೂ ಆಡಳಿತಾಧಿಕಾರಿಗಳ ಆಡಳಿತವಿದೆ. ಈ ಮಧ್ಯೆಯೂ ಪತ್ನಿಯ ಹೆಸರಲ್ಲಿ ಪತಿ ಆಡಳಿತ ಮಾಡುತ್ತಿರುವುದು ದುರಂತವೇ ಸರಿ.
ಪತ್ನಿಯ ಹೆಸರಲ್ಲಿ ಪತಿ ಶಶಿಧರ ದಿಂಡೂರ ಅಧಿಕಾರ ನಡೆಸಲು ಮುಂದಾಗಿದ್ದು, ಅವಳಿ ನಗರದಲ್ಲಿ ಚರ್ಚೆಯ ವಿಷಯವಾಗಿದೆ.