ವಿಜಯಸಾಕ್ಷಿ ಸುದ್ದಿ, ಗದಗ:
‘ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ ಫೈಲ್ಸ್’ ಹಿಂದಿ ಚಲನಚಿತ್ರವನ್ನು ಗದಗನಲ್ಲಿ ಮಾ.20,21 ಮತ್ತು 23ರಂದು ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಿದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದಗ-ಬೆಟಗೇರಿ ನಗರದ ಶಾಂತಿ ಚಿತ್ರಮಂದಿರಲ್ಲಿ ತೆರೆಕಂಡಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮಾ.20, 21 ಮತ್ತು 23ರಂದು ಗದಗ ಜನತೆ ಉಚಿತ ವೀಕ್ಷಿಸಲು ಅವಕಾಶ ನೀಡಲಾಗಿದೆ. 12 ರಿಂದ 3 ಗಂಟೆ, 3 ರಿಂದ 6 ಗಂಟೆಯವರೆಗಿನ ಎರಡು ಶೋಗಳು ಉಚಿತವಿರಲಿವೆ. ಮೂರು ದಿನದ ಆರು ಶೋಗಳಿಗೆ ಸಂದಾಯವಾಗುವ ಹಣವನ್ನು ಚಿತ್ರಮಂದಿರದ ಮಾಲೀಕರಿಗೆ ಪಾವತಿಸಲಾಗಿದೆ ಎಂದು ತಿಳಿಸಿದರು.
‘ಜಮ್ಮು ಕಾಶ್ಮೀರದಲ್ಲಿ ಅಂದು ಪಂಡಿತರ ಮೇಲಿನ ದೌರ್ಜನ್ಯ, ಮಹಿಳೆಯರನ್ನು ವಿಚಿತ್ರವಾಗಿ ನಡೆಸಿಕೊಂಡ ರೀತಿಯನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆದಿಟ್ಟಿದೆ. ಸಿನಿಮಾ ವೀಕ್ಷಿಸಿವಾಗ ಗೊತ್ತಿಲ್ಲದೆ ಕಣ್ಣಂಚಲ್ಲಿ ನೀರು ತುಂಬಿ ಬರುತ್ತವೆ’ ಎಂದು ಸಿ.ಸಿ.ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಬಿಜೆಪಿ ಮುಖಂಡರಾದ ಅನಿಲ್ ಮೆಣಸಿನಕಾಯಿ, ಸಂಗಮೇಶ ದುಂದೂರ, ರಾಜು ಕುರುಡಗಿ, ಎಂ.ಎಸ್.ಕರೀಗೌಡ್ರ ಸೇರಿದಂತೆ ಅನೇಕರು ಇದ್ದರು.

