ಗದಗ ಜಿಲ್ಲೆಗಿಂದು ನೂತನ ಉಸ್ತುವಾರಿ ಸಚಿವರ ಮೊದಲ ಭೇಟಿ; ಹೊಸ ಮಂತ್ರಿಗೆ ಹಳೆ ಸವಾಲು!

0
Spread the love

ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಪರ್ವ ಸೃಷ್ಟಿಸುತ್ತಾರಾ ಕೌರವ?

Advertisement

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಗೆ ಸೇರುವ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಹಲವು ಸವಾಲುಗಳು ಎದುರಾಗಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ, ಆಡಳಿತದಲ್ಲಿ ಬಹಳಷ್ಟು ಬದಲಾವಣೆ ತರುವ ಮಹತ್ವದ ಹೊಣೆಗಾರಿಕೆ ಇದೆ.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿದ್ದು, ಜಿಲ್ಲೆಯವರಾಗಿದ್ದ ಸಿ.ಸಿ.ಪಾಟೀಲರಿಗೆ ಪಕ್ಕದ ಬಾಗಲಕೋಟೆ ಜಿಲ್ಲೆಯ ಹೊಣೆ ನೀಡಿದರೆ, ನೆರೆಯ ಹಾವೇರಿ ಜಿಲ್ಲೆಯ ಬಿ.ಸಿ.ಪಾಟೀಲ್ ಅವರಿಗೆ ಗದಗ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಕೇತ್ರದ ಶಾಸಕರಾಗಿರುವ ಇವರು, ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವರಾಗಿರುವ ಬಿ.ಸಿ.ಪಾಟೀಲ್ ಕೃಷಿ ಖಾತೆ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ್ಯೂ ಇದೇ ಖಾತೆ ನಿರ್ವಹಿಸಿದ ಅನುಭವ ಇವರಿಗಿದೆ.

ಹಲವು ವರ್ಷಗಳ ಬಳಿಕ ಬೇರೆ ಜಿಲ್ಲೆಯವರಿಗೆ ಗದಗ ಉಸ್ತುವಾರಿ ನೀಡಿರುವುದರಿಂದ ಜಿಲ್ಲೆಯ ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ.

ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಆಡಳಿತ ವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಈ ಹಿಂದೆ ಬೇರೆ ಜಿಲ್ಲೆಯವರು ಗದಗ ಉಸ್ತುವಾರಿ ಮಂತ್ರಿಯಾಗಿದ್ದರೂ, ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಬಿಸಿಪಿ ಹೇಗೆ ಶ್ರಮಿಸುತ್ತಾರೆ? ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಾರೆಯೇ ಎಂಬ ಕುತೂಹಲ ಹೆಚ್ಚಿಸಿದೆ.

ಅದರಂತೆ, ಪ್ರತಿವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ತ್ವರಿತಗತಿಯಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಕೆಲಸಗಳು, ಆರ್ಥಿಕ ವರ್ಷದ ಆರಂಭದಲ್ಲೇ ಆಗಬೇಕಿವೆ. ತವರು ಜಿಲ್ಲೆಯವರೇ ಲೋಕೋಪಯೋಗಿ ಸಚಿವರಾಗಿದ್ದರೂ ರಸ್ತೆಗಳ ಸುಧಾರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳ ರಸ್ತೆಗಳು ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸುಧಾರಣೆಗೊಳ್ಳಬೇಕಿವೆ. ಅಲ್ಲದೇ, ಅಲ್ಲಲ್ಲಿ ತೆಪೆ ಹಾಕುವ ಕೆಲಸವಾಗುತ್ತಿದ್ದು, ತೆಪೆ ಹಾಕುವುದನ್ನು ಬಿಟ್ಟು ಸಂಪೂರ್ಣ ರಸ್ತೆ ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆ ಇದೆ. ಅವಳಿ ನಗರದಲ್ಲಿ ಆಮೆವೇಗದಲ್ಲಿ ಸಾಗುತ್ತಿರುವ ನಿರಂತರ ಕುಡಿಯುವ ನೀರು ಯೋಜನೆ, ಒಳಚರಂಡಿ(ಯುಜಿಡಿ)ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕಿದೆ. ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ದೇವಾಲಯ, ಪ್ರವಾಸಿ ತಾಣಗಳನ್ನು ಪುನಶ್ಚೇತನಗೊಳಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಇವೆಲ್ಲಾ ಆಗಬೇಕೆಂದರೆ, ಪ್ರಾಮಾಣಿಕ ಅಧಿಕಾರಿಗಳ ತಂಡ ಬೇಕಿದೆ. ಜಿಡ್ಡು ಹಿಡಿದಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಿದೆ. ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಬೇರೆ ಅಧಿಕಾರಿಗಳನ್ನು ನೇಮಿಸುವ ಕೆಲಸವಾಗಬೇಕಿದೆ. ಅಲ್ಲದೇ, ವಲಸಿಗ ಎಂಬ ಅಳುಕಿದ್ದು, ಜಿಲ್ಲೆಯ ಸ್ವಪಕ್ಷದವರ ಮನಗೆಲ್ಲಬೇಕಿದೆ. ಅಂದಾಗ ಸಚಿವ ಬಿ.ಸಿ.ಪಾಟೀಲ್ ಗದಗ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ.

ಜಿಲ್ಲೆಯ ಸಮಸ್ಯೆಗಳು

*ಅನುದಾನದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಒದಗಿಸಬೇಕಿದೆ.
*1992ರಲ್ಲಿ 63 ಕೋಟಿ ರೂ., ಪ್ರಸ್ತುತ 5,798 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗಿರುವ ಶಿಂಗಟಾಲೂರ ಏತನೀರಾವರಿ ಯೋಜನೆಯ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಬೇಕಿದೆ.
*ಸೂಕ್ಷ್ಮ ಹನಿ ನೀರಾವರಿ ಬದಲು ಕಾಲುವೆಗಳ ಮೂಲಕ ನೀರು ಹರಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ.
*ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಮುಂಜೂರಾದ ಕಾರ್ಮಿಕರ ವಸತಿ ಗೃಹ ನಿರ್ಮಾಣಕ್ಕೆ ಇನ್ನೂವರೆಗೂ ಚಾಲನೆ ಸಿಕ್ಕಿಲ್ಲ.
*ಜಿಲ್ಲೆಯ ಬಹು ಗ್ರಾಮಗಳ ಕೆರೆಗೆ ನೀರು ಪೂರೈಸುವ ಜಾಲವಾಡಗಿ ಏತನೀರಾವರಿ ಯೋಜನೆಗೆ ಅನುದಾನ ನೀಡಿ, ಕಾಮಗಾರಿಗೆ ಚಾಲನೆ ನೀಡಬೇಕಿದೆ.
*ಗದಗ-ಬೆಟಗೇರಿ ಅವಳಿ ನಗರಕ್ಕೆ ನಿರಂತರ ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಬೇಕಿದೆ.
*ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ.
*ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾದ ಈರುಳ್ಳಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ.
*ಬಳ್ಳಾರಿಯಂತೆ ಒಣ ಮೆಣಸಿನಕಾಯಿ ಮಾರುಕಟ್ಟೆ ಅಥವಾ ಬ್ಯಾಡಗಿಯಂತೆ ಗದಗನಲ್ಲೂ ಆಧುನಿಕ ಗುಣ ವಿಶ್ಲೇಷಣಾ ಘಟಕ ಸ್ಥಾಪನೆಗೊಳ್ಳಬೇಕಿದೆ.


Spread the love

LEAVE A REPLY

Please enter your comment!
Please enter your name here