ವಿಜಯಸಾಕ್ಷಿ ಸುದ್ದಿ, ಮೈಸೂರು
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ಗೆ ಕೊಡುವ ಆದ್ಯತೆ ರಾಜ್ಯಕ್ಕೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಜೀವಂತವಾಗಿದೆ ಎಂದು ಕಾಣಿಸುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆ ನೆರೆ ಸಂತ್ರಸ್ತರಿಗೆ ಸೂರು ವ್ಯವಸ್ಥೆ ಕಲ್ಪಿಸಿಲ್ಲ. ಗುಜರಾತ್ ನೆರೆ ಪೀಡಿತರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
2019 ರಲ್ಲಿ ಪ್ರವಾಹದಿಂದ 38 ಸಾವಿರ ಕೋಟಿ, 2020 ರಲ್ಲಿ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆದರೆ, ಕೇಂದ್ರ 1280 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇತ್ತು. ಆದರೆ, ರಾಜ್ಯದ ಸಂಸದರು ಚಕಾರ ಎತ್ತಲಿಲ್ಲ ಎಂದು ಟೀಕಿಸಿದರು.
ಕನಿಷ್ಟ ಕ್ಷೇತ್ರದಲ್ಲೂ ಇಲ್ಲದೆ ಬೆಂಗಳೂರು, ದೆಹಲಿಯಲ್ಲಿ ಕುಳಿತಿದ್ದಾರೆ. ನೆರೆ ನಿರ್ವಹಣೆ ಮಾಡದೆ ಅಧಿಕಾರಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.
ಕೊರೊನಾ ಮೂರನೇ ಅಲೆ ಪರಿಣಾಮಕಾರಿಯಾಗಿ ಎದುರಿಸಲು ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸಿಎಂ, ಸಚಿವ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ
ಮುಖ್ಯಮಂತ್ರಿ, ಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ. ಗುರುತರವಾದ ಮಹತ್ವದ ಜವಾಬ್ದಾರಿ. ಎಸ್.ಆರ್. ಬೊಮ್ಮಾಯಿ ರಾಯಿಸ್ಟ್ ಐಡಿಯಾಲಜಿವುಳ್ಳವರು. ಜನರ ಬದುಕಿಗೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳಿಸಿದ್ಯಾರು?
ಬೊಮ್ಮಾಯಿ ಸರ್ಕಾರ ಬೀಳಲು ಬಿಡಲ್ಲ ಎಂಬ ಹೆಚ್.ಡಿ. ದೇವೆಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳೋಕೆ ಕಾರಣ ಯಾರು ಅನ್ನೋದನ್ನ ಮೊದಲು ಹೇಳಲಿ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ಗೆ ಅಸ್ಥಿರತೆಯಿಂದ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ. ಇಲ್ಲವೆ, ಅನಿವಾರ್ಯವಾಗಿ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ ಗೊತ್ತಿಲ್ಲ. ಜಾತ್ಯಾತೀತ ಸಿದ್ದಾಂತವುಳ್ಳವರು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.