ವಿಜಯಸಾಕ್ಷಿ ಸುದ್ದಿ, ಗದಗ
ನಗರದ ಹೊಸ ಹುಡ್ಕೋ ಕಾಲನಿಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯಾಹ್ನ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಹೆಜ್ಜೆ ಗುರುತು ಚಿರತೆಯದ್ದು ಎಂದು ನಂಬಲಾಗಿತ್ತು. ಆದರೆ, ಈ ಕುರಿತು ಮಂಗಳವಾರ ರಾತ್ರಿ ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ‘ಇದು ಚಿರತೆಯ ಹೆಜ್ಜೆ ಗುರುತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಹಿಂದಿರುವ ಹೊಸ ಹುಡ್ಕೋ ಕಾಲನಿಯಲ್ಲಿ ಚಿರತೆ ಅಡ್ಡಾಡಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿರುವ ಕಾರಣಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಂಗಳವಾರ ರಾತ್ರಿಯಿಡೀ ಅಧಿಕಾರಿಗಳನ್ನು ಗಸ್ತಿಗಾಗಿ ನಿಯೋಜಿಸಲಾಗಿದೆ. ಅಲ್ಲದೇ, ಚಿರತೆಯ ಚಲನವನಗಳನ್ನು ಪತ್ತೆ ಹಚ್ಚಲು ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆಯಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಸ್ವತಃ ಡಿಎಫ್‌ಒ ಸೂರ್ಯಸೇನ್ ಅವರೇ, ಡ್ರೋಣ್ ಕ್ಯಾಮೆರಾ ಮೂಲಕ ಅಂಬೇಡ್ಕರ್ ಭವನದ ಹಿಂಬದಿಯ ಪ್ರದೇಶದಲ್ಲಿರುವ ಹಳ್ಳ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಮತ್ತು ಹೊಸ ಹುಡ್ಕೋ ಕಾಲನಿಯಲ್ಲಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಚಲನವಲನ ಕಂಡುಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ ಗದಗ ನಗರದಲ್ಲಿ ಚಿರತೆ ಪ್ರತ್ಯಕ್ಷ?
ಮಂಗಳವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷ ಎಂಬ ವದಂತ ಹಿನ್ನೆಲೆಯಲ್ಲಿ ಸ್ಥಳೀಯರು ಹೊರ ಬಂದಿರಲಿಲ್ಲ.