*ನೀರು ಪೂರೈಕೆಯಲ್ಲ, ಕಾಮಗಾರಿಯೇ ನಿರಂತರ! *ಗದಗ-ಬೆಟಗೇರಿ ಅವಳಿ ನಗರದ ನೀರಿನ ಸಮಸ್ಯೆ ಈಗ ಚುನಾವಣಾ ವಿಷಯ
*ಬಿಜೆಪಿ-ಕಾಂಗ್ರೆಸ್ ಕೆಸರೆರಚಾಟ
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ಅವಳಿ ನಗರದ ಜನರ ನೀರಿನ ಬವಣೆ ನೀಗಿಸಲು ಶಾಶ್ವತ ಕುಡಿಯುವ ನೀರು ಪೂರೈಸುವ ಶಾಸಕ ಎಚ್.ಕೆ. ಪಾಟೀಲರ ಕನಸಿನ 24×7 ಕುಡಿಯುವ ನೀರು ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಳ್ಳ ಹಿಡಿದಿದೆ. 2017ರಲ್ಲಿ ಪೂರ್ಣಗೊಂಡಿದ್ದ ಯೋಜನೆಯ ಎರಡು ಪ್ಯಾಕೇಜ್‌ಗೆ ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ, ಇಂದಿಗೂ ನಗರದ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಇಲಾಖೆ (ಕೆಯುಐಡಿಎಫ್‌ಸಿ) ಅಧಿಕಾರಿಗಳು ವಿಫಲವಾಗಿದ್ದಾರೆ.
ಅವಳಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ನಗರಸಭೆಯಲ್ಲಿ ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ನಗರದ ಕೆಲವು ಬಡಾವಣೆಗಳಿಗೆ 2-3 ದಿನಗಳಿಗೊಮ್ಮೆ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿದೆ. ಆದರೆ, ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಸ್ಲಂ, ಹಿಂದುಳಿದ ಪ್ರದೇಶಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಕಾಮಗಾರಿ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷಗಳ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಮೂರು ಕಡೆ ಸೋರಿಕೆ
ವಿಧಾನಸಭೆ, ಲೋಕಸಭೆ ಹಾಗೂ ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್, ಗದಗ-ಬೆಟಗೇರಿ ನಗರಸಭೆ ಚುನಾವಣೆ ಸೇರಿ ಹಲವು ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿವೆ. ಅದೀಗ ಚುನಾವಣೆ ವಿಷಯವಾಗಿ ಮಾರ್ಪಟ್ಟಿದೆ.

24×7 ಕುಡಿಯುವ ನೀರು ಯೋಜನೆಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್, ಬಿಜೆಪಿ ನಾಯಕರು ತುದಿಗಾಗಲಲ್ಲಿ ನಿಂತಿರುವ ಹೊತ್ತಲ್ಲೇ ಅವಳಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಯೋಜನೆಯ ಎರಡನೇ ಹಂತದ ಕಾಮಗಾರಿಯ ಅಡವಿಸೋಮಾಪುರ ಸಮೀಪದ ಚಿಕ್ಕಟ್ಟಿ ಶಾಲೆಯ ಬಳಿ ಸೇರಿ ಮೂರು ಕಡೆಗಳಲ್ಲಿ ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್ ಸೋರಿಕೆಯಾಗುತ್ತಿದೆ. ಇದರಿಂದ ಅವಳಿ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಗದಗ-ಬೆಟಗೇರಿಯಿಂದ 70 ಕಿ.ಮೀ. ದೂರದ ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಅವಳಿ ನಗರಕ್ಕೆ ನೀರು ಸರಬರಾಜು ಆಗುತ್ತಿದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗುತ್ತಿರುವುದರಿಂದ ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
ವರ್ಷಪೂರ್ತಿ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಒಂದು ಮತ್ತು ಎರಡನೇ ಪ್ಯಾಕೇಜ್‌ನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಪ್ಯಾಕೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಮುಖ್ಯ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ.

ಮೂರು ಪ್ಯಾಕೇಜ್ ಕಾಮಗಾರಿಗೆ 211 ಕೋಟಿ ರೂ. ವೆಚ್ಚ
ಗದಗ-ಬೆಟಗೇರಿ ಕುಡಿಯುವ ನೀರು ಯೋಜನೆಯ ಮೂರು ಪ್ಯಾಕೇಜ್‌ಗಳಲ್ಲಿ ಮೊದಲ ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ ಒಟ್ಟು 126 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ 2017 ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ. ಇವೆರಡೂ ಪ್ಯಾಕೇಜ್‌ನಲ್ಲಿ ಹಮ್ಮಿಗಿ ಡ್ಯಾಂನಿಂದ ಪಾಪನಾಶಿ ಗ್ರಾಮದ ಹತ್ತಿರ ನಿರ್ಮಿಸಿರುವ ಡಬ್ಲ್ಯೂಟಿಪಿಯಿಂದ ತೋಂಟದಾರ್ಯ ಕಾಲೇಜ್‌ವರೆಗೆ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸಿ, ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಒಟ್ಟು 85 ಕೋಟಿ ರೂ. ವೆಚ್ಚದ ಮೂರನೇ ಪ್ಯಾಕೇಜ್ ಕಾಮಗಾರಿ 2014ರಲ್ಲಿಯೇ ಆರಂಭಗೊಂಡಿದೆ. ಈ ಮೊದಲು 300 ಕಿ.ಮೀ. ಅಷ್ಟೇ ಮನೆಗಳಿಗೆ ಪೈಪ್‌ಲೈನ್ ಅಳವಡಿಸಬೇಕಿತ್ತು. ಆದರೆ, ಹೆಚ್ಚುವರಿಯಾಗಿ 168 ಕಿ.ಮೀ. ಸೇರಿದ್ದರಿಂದಾಗಿ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ಶೇ.12ರಷ್ಟು ಕೆಲಸ ಬಾಕಿ ಉಳಿದಿದೆ. ಅವಳಿ ನಗರದ 40,578 ಮನೆಗಳ ಪೈಕಿ ಈವರೆಗೆ 36,646 ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಇನ್ನೂ 844 ವಾಲ್ವ್ಗಳನ್ನು ಅಳವಡಿಸಬೇಕಿದೆ. ಸುಮಾರು 17 ಕಿ.ಮೀ.ನಷ್ಟು ಪೈಪ್‌ಲೈನ್ ಹಾಕಬೇಕಿದೆ. ಸಂಜಯ್ ನಗರದ ಟ್ಯಾಂಕ್ ಕೆಲಸ ಇನ್ನೂ ಬಾಕಿ ಇದೆ ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್ ಸುಭಾಷ್ ಬಾಜಣ್ಣವರ `ವಿಜಯಸಾಕ್ಷಿ’ಗೆ ತಿಳಿಸಿದರು.
ಗದಗ-ಬೆಟಗೇರಿ ಅವಳಿ ನಗರಕ್ಕೆ ಡಿ.೫ರಂದು ಕೆಯುಐಡಿಎಫ್‌ಸಿ ಎಂಡಿ ಎಂ.ಟಿ.ರೇಜು ಹಾಗೂ ಸೂಪರಿಟೆಂಡೆಂಟ್ ಎಂಜಿನಿಯರ್ ಭೇಟಿ ನೀಡಿ ಕುಡಿಯುವ ನೀರು ಯೋಜನೆಯ ಮೂರನೇ ಪ್ಯಾಕೇಜ್ ಕಾಮಗಾರಿ ಪರಿಶೀಲಿಸಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಯನ್ನು 2022 ಜನವರಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ.
ಸುಭಾಷ್ ಬಾಜಣ್ಣವರ, ಕೆಯುಐಡಿಎಫ್ಸಿ, ಎಇಇ
ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಗದಗ-ಬೆಟಗೇರಿಗೆ ನೀರು ಪೂರೈಸುತ್ತಿರುವ ಮುಖ್ಯ ಪೈಪ್‌ಲೈನ್ ಅಡವಿಸೋಮಾಪುರದ ಹತ್ತಿರ ಮೂರು ಕಡೆಗಳಲ್ಲಿ ಒಡೆದು ನೀರು ಪೋಲಾಗುತ್ತಿತ್ತು. ನೀರು ವಿನಾಕಾರಣ ಪೋಲಾಗದಂತೆ ತಡೆಯಲು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅವಳಿ ನಗರದ ಜನರು ಸಹಕರಿಸಬೇಕು.
ಗುರುಪ್ರಸಾದ್, ಪ್ರಭಾರಿ ಪೌರಾಯುಕ್ತರು