ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಯುವ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಯುವ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯುತ್ತಿವೆ.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯೂ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಜಿಲ್ಲೆಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಕ್ಕಾಗಿ ಬ್ಯಾನರ್ ಸಿದ್ಧಪಡಿಸಲಾಗಿತ್ತು. ಅದಕ್ಕಾಗಿಯೇ ಎಲ್ಲ ನಾಯಕರ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಲಾಗಿತ್ತು. ಆದರೆ, ಅಲ್ಪಸಂಖ್ಯಾತರ ಅಧ್ಯಕ್ಷರ ಭಾವಚಿತ್ರ ಅದರಲ್ಲಿ ಹಾಕಿರಲಿಲ್ಲ. ಇದರಿಂದಾಗಿ ಕೆಲವು ಅಲ್ಪಸಂಖ್ಯಾತ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಅಧ್ಯಕ್ಷ ಅಶೋಕ ಮಂದಾಲಿ ಅವರ ಕಾಲೆಳೆದಿದ್ದಾರೆ.

ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಧ್ಯಕ್ಷರು ಇದ್ದಾರೋ ಅಥವಾ ಇಲ್ಲವೋ ಎಂಬುವುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಕ್ರೋಶ ಹೊರಹಾಕಲಾಗಿದೆ. ಹಲವರು ಇದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧ್ಯಕ್ಷರನ್ನೇ ಮರೆತಿದ್ದಾರೆ!
ಒಬ್ಬ ಜಿಲ್ಲಾಧ್ಯಕ್ಷರನ್ನೇ ಮರೆಯಲಾಗಿದೆ. ಹಿಂದುಳಿದ ವರ್ಗದ ನಾಯಕರು ತುಂಬಾ ಜನ ಇದ್ದಾರೆ. ಅವರಿಗೆ ತಮ್ಮದೇ ಆದ ಸಿದ್ಧಾಂತಗಳು ಇವೆ. ಆದರೆ, ಒಬ್ಬ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಇವರ ಕೊಡುಗೆ ಏನು? ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಮಾತನಾಡಿಸುವುದಿಲ್ಲ. ಗೌರವ ಕೊಡುವುದಿಲ್ಲ. ಹೀಗಾಗಿ ಕಾರ್ಯಕರ್ತರು ಇವರ ಕಾರ್ಯಕ್ರಮಗಳಿಗೆ ಬರುವುದು ಕಡಿಮೆಯಾಗುತ್ತಿದೆ. ಇವರ ವರ್ತನೆಯಿಂದ ನಾಯಕರು ಹಾಗೂ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಿಮಡಿ ಕುಮಾರ್ ಮೌರ್ಯ ಎಂಬುವವರು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ನವೀನ್ ಭಂಡಾರಿ ಎಂಬುವರು ಎಲ್ಲರನ್ನೂ ಕರೆದುಕೊಂಡು ಹೋಗುವ ಮನಸ್ಥಿತಿ ಹೊಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಹಲವು ಬಗೆಯಲ್ಲಿ ಚರ್ಚೆ
ಈ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ಕುಟುಂಬದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಯುಥ್ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಈ ವೈಮನಸ್ಸು ಇಲ್ಲಿಗೆ ನಿಲ್ಲುತ್ತದೋ ಅಥವಾ ಮುಂದುವರೆಯುತ್ತೋ ಎಂಬುದನ್ನು ಕಾದು ನೋಡಬೇಕು.