//ಜೇಮ್ಸ್ ಸಿನಿಮಾ ವಿಮರ್ಶೆ//ದೇಶಪ್ರೇಮಿ‌ ಸೈನಿಕನ ಸ್ನೇಹದ ಸೇಡು

0
Spread the love


ರೇಟಿಂಗ್:***1/2

Advertisement


ತಾರಾಗಣ:
ಪುನೀತ್ ‌ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಅವಿನಾಶ್, ಪ್ರಿಯಾ ಆನಂದ್, ತಿಲಕ್, ಶೈನ್ ‌ಶೆಟ್ಟಿ, ಶ್ರೀಕಾಂತ್, ಶರತ್, ರಿಷಿ, ಸಾಧುಕೋಕಿಲ, ಚಿಕ್ಕಣ್ಣ, ನಯನಾ, ಗೋವಿಂದ್‌ರಾಜ್, ಹರ್ಷ, ಕಾವ್ಯಾಶಾಸ್ತ್ರಿ, ಅಶ್ವಿನಿ‌ಹಾಸನ್. , ನಿರ್ದೇಶನ: ಚೇತನ್ ನಿರ್ಮಾಪಕ: ಕಿಶೋರ ಪತ್ತಿಕೊಂಡ ಸಂಗೀತ: ಚರಣ್‌ರಾಜ್ ಛಾಯಾಗ್ರಹಣ: ಸ್ವಾಮಿಗೌಡ ಸಂಕಲನ: ದೀಪು ಎಸ್.ಕುಮಾರ್

ಬಸವರಾಜ ಕರುಗಲ್.
“ಇವ್ನು ರೇಸ್‌ಗೆ ಇಳಿಯಲ್ಲ, ಇಳಿದ್ರೆ ಅದು ರೇಸ್ ಅಲ್ಲ, ಒನ್ ಮ್ಯಾನ್ ಶೋ”

ಇದು ಜೇಮ್ಸ್ ಸಿನಿಮಾ ನಾಯಕನ ಇಂಟರ್‌ಡಕ್ಷನ್ ಡೈಲಾಗ್.. ಈ ಡೈಲಾಗ್ ಇಡೀ ಸಿನಿಮಾದುದ್ದಕ್ಕೂ ನಿಜ ಅನ್ಸುತ್ತೆ… ಜೇಮ್ಸ್ ಸಿನಿಮಾದಲ್ಲಿ ಮಾತಿನ ಅಬ್ಬರಕ್ಕಿಂತ ಗುಂಡಿನ ಆರ್ಭಟವೇ ಹೆಚ್ಚು. ಸಾಹಸ ದೃಶ್ಯಗಳಿಗೆ ತೂಕ ಅಪಾರ. ಕಥೆ ಒಂಚೂರು ಸಪೂರ.

ಜೇಮ್ಸ್ ಕಥೆ ಸರಳವಾಗಿದ್ದರೂ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಜಾರಿಸುವ ಉದ್ದೇಶದಿಂದಲೇ ಅಲ್ಲಲ್ಲಿ ಟ್ವಿಸ್ಟ್, ಟರ್ನ್, ಫ್ಲ್ಯಾಶ್‌ಬ್ಯಾಕ್‌ಗಳ ಮೂಲಕ ಕಥೆಯನ್ನ ಹೆಣೆಯಲಾಗಿದೆ. ದೇಶಪ್ರೇಮ‌ ಬಿಂಬಿಸುವ, ಅನಾಥನಾಗಿದ್ದರೂ ಗೆಳೆತನದ ಬಾಂಧವ್ಯ ಸಾರುವ ಜೊತೆಗೆ ಸ್ನೇಹಕ್ಕಾಗಿಯೇ ಸೇಡು ತೀರಿಸಿಕೊಳ್ಳುವ ಹೊಸತನ ಸೇರಿಸಲಾಗಿದೆ.

ಜೇಮ್ಸ್-ಇದೊಂದು ಸೆಕ್ಯುರಿಟಿ ಏಜೆನ್ಸಿಯ ಹೆಸರು. ಈ ಹೆಸರು ಇಡಲು ರೋಚಕ ಮತ್ತು‌ ಇಂಟರೆಸ್ಟಿಂಗ್ ಹಿನ್ನೆಲೆ ಇದೆ. ಅದೇನು ಅನ್ನೋದನ್ನ ಸಿನಿಮಾ ನೋಡಿ ತಿಳ್ಕೊಂಡರೇನೇ ಚೆಂದ. ಖಳನೊಬ್ಬನಿಗೆ‌ ಮೂರು ತಿಂಗಳು ಭದ್ರತೆ ನೀಡುವ ಕೆಲಸ ಒಪ್ಪಿಕೊಳ್ಳುವ ಸಂತೋಷ್‌ಕುಮಾರ್ ಜೇಮ್ಸ್ ಏಜೆನ್ಸಿಯ ರೂವಾರಿ. ಆ ಖಳನಿಗೆ ರಕ್ತಸಂಬಂಧಿಯೇ ವಿಲನ್, ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆಯ ಕಿಂಗ್‌ಪಿನ್‌ಗಳು ಇಬ್ಬರೂ ವಿಲನ್‌ಗಳು ಮಾರ್ಕೆಟ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇಬ್ಬರು ಡಾನ್‌ಗಳ ನಡುವೆ ಆಗಾಗ ಗುಂಡಿನ ಸುರಿಮಳೆ, ಲಾಂಗುಗಳ ಜಡೀಮಳೆ, ಒಮ್ಮೆ ಅಘೋರಿಗಳ ಅಟ್ಯಾಕ್, ಮತ್ತೊಮ್ಮೆ ಸೂಟು-ಬೂಟುಧಾರಿಗಳ ಕಾರ್ ಚೇಸಿಂಗ್..ಒಂಥರಾ ಹಾಲಿವುಡ್ ಮೂವ್ ರೇಂಜ್‌ಗೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ..

ಸೆಕ್ಯುರಿಟಿ ನೀಡುವ ವಿಲನ್ ತಂಗಿ ಜೊತೆಗೆ ನಾಯಕ ಸಂತೋಷ್‌ಗೆ ಲವ್ವು, ಇದಕ್ಕೆ ನಾಯಕಿಯ ಅಣ್ಣ ಡಾನ್‌ನ ಗ್ರೀನ್ ಸಿಗ್ನಲ್.. ಸಂತೋಷ್ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ ಎನ್ನುವ ಡಾನ್‌ನ ಡೈಲಾಗ್ ಇನ್ನು ಮುಗಿದಿರಲ್ಲ, ಸಂತೋಷ್ ಅಂದ್ರೆ ಭಯಾನೂ ಇರಬೇಕು ಸರ್ ಎಂದು ಹೇಳಿ ನಾಯಕನಿಂದ ವಿಲನ್ ಪಡೆ ಛಿದ್ರ ಛಿದ್ರ…ಈ ಹೊತ್ತಿಗೆ ಸಂತೋಷ್ ನಾಯಕನೋ? ಖಳನಾಯಕನೋ? ಎನ್ನುವ ಹುಳ ತಲೆಗೆ ಬೀಳುತ್ತಿದ್ದಂತೆ ವಿರಾಮ.

ಆನಂತರ ಶುರುವಾಗೋದು ಫ್ಯಾಮಿಲಿ ಡ್ರಾಮಾ, ಸಿನಿಮಾದ ಎರಡನೇ ಭಾಗದಲ್ಲಿ‌ ನಿಜವಾದ ಕಥೆ ಗರಿಗೆದರುತ್ತೆ. ವಿಲನ್‌ ಎನಿಸಿದವನು ಮತ್ತೇ ಹೀರೋ ಆಗ್ತಾನೆ. ಸಂತೋಷ್ ಮಿಲ್ಟ್ರಿಯಲ್ಲಿ‌ ಮೇಜರ್ ಆಗಿ ಭಯೋತ್ಪಾದಕರನ್ನು‌ ಮಟ್ಟ ಹಾಕುವ ಸಣ್ಣ ಎಳೆ ಇಣುಕಿ ಹೋಗುತ್ತದೆ. ಇದೇ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಬಂದು ಹೋಗುತ್ತಾರೆ. ಪುನೀತ್‌ಗೆ ಶಿವಣ್ಣ‌ ಗುರಿ ತೋರಿದರೆ, ರಾಘಣ್ಣ ಗುರುವಾಗಿ ಮುನ್ನಡೆಸುವ ಝಲಕ್ ಪ್ರೇಕ್ಷಕರನ್ನು ಪುಳಕಿತರನ್ನಾಗಿಸುತ್ತದೆ. ಆನಂತರ ಮತ್ತದೇ ಗುಂಡಿನ ಮೊರೆತ, ಸಿಡಿಮದ್ದುಗಳ ಸದ್ದು, ಅಂತಿಮವಾಗಿ ಖಳರ ಹೆಡೆಮುರಿ..

ಒಟ್ಟಾರೆ ಜೇಮ್ಸ್ ಗೆಳೆತನಕ್ಕಾಗಿ‌ ರಿವೇಂಜ್ ತೆಗೆದುಕೊಳ್ಳುವ ದೇಶಪ್ರೇಮಿ ಸೈನಿಕನ ಕಥೆ ಹೊಂದಿದ್ದು, ಅಪ್ಪು ಅಭಿಮಾನಿಗಳಿಗೆ‌ ದೊಡ್ಡ ಹಬ್ಬ. ಜೊತೆಗೆ ಪುನೀತ್‌ರ ಕೊನೆಯ ಸಿನಿಮಾ ಬೇರೆ.. ಎಲ್ಲ ವರ್ಗದ‌ ಜನರನ್ನು ಸೆಳೆಯಲು ಸರ್ಕಸ್‌ ಮಾಡಿರುವುದು‌ ಗೊತ್ತಾಗುತ್ತದೆ. ಕೆಲವು ಕಡೆ ಪುನೀತ್ ಡ್ಯೂಪ್ ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪುನೀತ್ ನಟನೆಗೆ ಶಿವಣ್ಣ ಧ್ವನಿ‌ ನೀಡಿರುವುದು ಹೇಗಿದೆ ಎಂದರೆ ಇಡೀ ಸಿನಿಮಾದುದ್ದಕ್ಕೂ ಇಬ್ಬಿಬ್ಬರು ಹೀರೋಗಳನ್ನು ನೋಡಿದಂತೆ ಭಾಸವಾಗುತ್ತೆ. ತೆರೆಯಲ್ಲಿ‌ ಪುನೀತ್ ಕಂಡರೆ ಧ್ವನಿ‌ ಕೇಳುತ್ತಿದ್ದಂತೆ ಪುನೀತ್ ಪಾತ್ರದಲ್ಲಿ ಶಿವಣ್ಣ ಸಹ ಕಲ್ಪನೆಯಲ್ಲಿ ಬರ್ತಾರೆ.

ಜೇಮ್ಸ್‌ನಲ್ಲಿ ಕಲಾವಿದರ ದೊಡ್ಡ ದಂಡೇ‌ ಇದೆ. ಎಲ್ಲ ಕಲಾವಿದರಿಗೂ ಸ್ಕ್ರೀನ್ ಸಿಕ್ಕಿದೆ. ಆದರೆ ಬಹುತೇಕ ಕಲಾವಿದರು ಹೀಗೇ ಬಂದು, ಹಾಗೇ ಹೋಗುವಷ್ಟು ಮಾತ್ರ ಸ್ಪೇಸ್ ಪಡೆದಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ ಇದ್ದರೂ ಕಾಮಿಡಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಚೇಸಿಂಗ್ ಸೀನ್‌ಗಳಲ್ಲಿ ಸ್ವಾಮಿಗೌಡ ಅವರ ಕ್ಯಾಮೆರಾ ಕಣ್ಣಿಗೆ ಒಂದು ಸಲಾಂ ಹೇಳಬಹುದು. ಸಂಗೀತ ನಿರ್ದೇಶಕ ಚರಣ್‌ರಾಜದ ಹಿನ್ನೆಲೆ ಸಂಗೀತದಲ್ಲಿ ಗೆದ್ದಿದ್ದಾರೆ, ಹಾಡುಗಳಿಗೆ ಸಂಗೀತ ನೀಡುವಲ್ಲಿ ಎಡವಿದ್ದಾರೆ.

ನಾಯಕ ಪುನೀತ್ ಅವರನ್ನ ತೆರೆಯ ಮೇಲೆ‌ ನೋಡುವುದೇ ಖುಷಿ. ಕೊನೆ ಸಿನಿಮಾ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ‌ ಕ್ರೇಜ್ ಕ್ರಿಯೆಟ್ ಮಾಡಿದ ಜೇಮ್ಸ್‌, ಜಗತ್ತಿನಾದ್ಯಂತ ಕೆಜಿಎಫ್‌ ನಂತರ ಗ್ರ್ಯಾಂಡ್ ಒಪನಿಂಗ್ ಪಡೆದ ಕನ್ನಡದ ಎರಡನೇ ಸಿನಿಮಾ. ಪುನೀತ್ ಅವರ ಅಭಿನಯದ ಬಗ್ಗೆ ಹೇಳೋದೇನಿಲ್ಲ, ಕರ್ನಾಟಕದ ಮತ್ತೊಂದು ರತ್ನ. ಈಚೆಗಷ್ಟೇ ಅವರಿಗೆ ಮೈಸೂರು ವಿವಿ ಗೌಡಾ ನೀಡಿದ್ದನ್ನ ಚಿತ್ರತಂಡ ಅಪ್ಡೇಟ್ ಮಾಡಿಕೊಂಡು ಡಾ.ಪುನೀತ್ ರಾಜ್‌ಕುಮಾರ್ ಅಂತ ಟೈಟಲ್ ಕಾರ್ಡ್‌ನಲ್ಲಿ ಸೇರಿಸಿರುವುದು ಖುಷಿಯ ಸಂಗತಿ. ಅಪ್ಪು ಎಲ್ಲ ಸಿನಿಮಾಗಳಂತೆ ಡ್ಯಾನ್ಸ್, ಫೈಟ್‌‌ನಲ್ಲಿ ಸಖತ್ ಪವರ್. ಅದರಲ್ಲೂ ಜೇಮ್ಸ್‌ನ ಫೈಟಿಂಗ್ ಸೀನ್‌ಗಳು ಹಾಲಿವುಡ್ ಮಾದರಿಯಲ್ಲಿವೆ. ನಾಯಕಿ ಪ್ರಿಯಾ ಆನಂದ್ ರಾಜಕುಮಾರ ಸಿನಿಮಾ ನಂತರ ಮತ್ತೇ ಅಪ್ಪುಗೆ‌ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ಸುಧಾರಣೆ ಕಂಡಿದೆ ಎನ್ನಬಹುದು. ಖಳರಾಗಿ ಶರತ್‌ಕುಮಾರ್, ಶ್ರೀಕಾಂತ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮತ್ತಿತರರು ಖಳರಾಗಿ ವಿಜೃಂಭಿಸಿದ್ದಾರೆ. ಇಡೀ ಸಿನಿಮಾ ತುಂಬಾ ರಿಚ್ ಆಗಿ ಮೂಡಿ ಬಂದಿದ್ದು, ಸ್ಥಳೀಯವಾಗಿ ಕೊಪ್ಪಳದ ಗಂಗಾವತಿ, ಹೊಸಪೇಟೆ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಶ್ಮೀರ ಹಾಗೂ ವಿದೇಶದ‌ ಕೆಲ ಲೋಕೇಷನ್‌‌ಗಳಲ್ಲಿ ಶೂಟಿಂಗ್ ಆಗಿದೆ. ನಿರ್ಮಾಣದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ. ನಿರ್ದೇಶಕ ಚೇತನ್‌ ಹರಿತವಾದ, ಕಚಗುಳಿ ಇಡುವ ಮಾತುಗಳನ್ನು ಬರೆಯುವಿಕೆಯಲ್ಲಿ‌ ಹಿಡಿತ ಸಾಧಿಸಿದವರು. ಆದ್ರೆ ಜೇಮ್ಸ್‌ನಲ್ಲಿ ಚೇತನ್ ಲೇಖನಿ ಯೊಕೊ ಹರಿತವಾಗಿಲ್ಲ. ಕೆಲವು ಕಡೆ ಕಣ್ಣಂಚು ಒದ್ದೆಯಾಗಿಸುವ ದೃಶ್ಯಗಳನ್ನು ಸೇರಿಸಿ ಹೆಣ್ಮಕ್ಕಳು‌ ಸಹ ಜೇಮ್ಸ್ ಕಣ್ತುಂಬಿಕೊಳ್ಳಬಹುದು ಎಂಬುದನ್ನು ಹೇಳಲು ಒದ್ದಾಡಿರುವುದು ಗೊತ್ತಾಗುತ್ತದೆ. ನಿರ್ದೇಶಕನಾಗಿ‌ ದೊಡ್ಡ ಬಜೆಟ್ ಸಿನಿಮಾ‌ ನಿರ್ದೇಶಿಸಿದ್ದು ಚೇತನ್‌ ಹೆಗ್ಗಳಿಕೆ ಎನ್ನಬಹುದು.

ಒಟ್ಟಾರೆ ಜೇಮ್ಸ್ ಸಿನಿಮಾ, ಪುನೀತ್ ಅಭಿಮಾನಿಗಳಿಗೆ ಹೋಳಿ‌ಹಬ್ಬ, ಹೆಣ್ಮಕ್ಕಳಿಗೆ ಯುಗಾದಿ, ಯುವಕರಿಗೆ ದಸರಾ, ಫ್ಯಾಮಿಲಿಗೆ ದೀಪಾವಳಿ. ಗನ್‌ಗಳ ಮೊರೆತ ಸಹಿಸುವುದಾದರೆ ಮುಜುಗರ‌ ಇಲ್ಲದೇ ಕುಟುಂಬಸಮೇತ ಜೇಮ್ಸ್‌ನನ್ನು‌ ನೋಡಿ, ಹರಸಿ, ಹಾರೈಸಿ, ಆಶಿರ್ವದೀಸಬಹುದು.

ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.

ಸ್ಟಾರ್ ರೇಟಿಂಗ್: * : ಚನ್ನಾಗಿಲ್ಲ ** : ಸುಮಾರಾಗಿದೆ *** : ಚನ್ನಾಗಿದೆ **** : ತುಂಬಾ ಚನ್ನಾಗಿದೆ ***** : ಮಿಸ್ ಮಾಡ್ದೆ ನೋಡಿ


Spread the love

LEAVE A REPLY

Please enter your comment!
Please enter your name here