ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್

0
Spread the love

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

Advertisement

ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯಗೆ
ಚಿತ್ರದುರ್ಗದಲ್ಲಿ ತಿರುಗೇಟು ನೀಡಿದರು.

ದೇಶದ ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಡಾ.ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ನವರು, 2ನೇ ಬಾರಿ ಅವರ ಸಹಾಯಕನನ್ನೇ ಎದುರು‌ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಭಾರತರತ್ನವೂ ಕೊಡಲಿಲ್ಲ, ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ಕಾಂಗ್ರೆಸ್ ನವರು ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ ಎಂದು ಕುಟುಕಿದರು.

ಸಿದ್ದರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದರು. ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲಿಲ್ಲ, ಕ್ಷೇತ್ರದಲ್ಲಿ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ, ಚಂದ್ರಪ್ಪ, ದೃವನಾರಾಯಣ ಸೇರಿ ದಲಿತ ಮುಖಂಡರನ್ನು ಸೋಲಿಸಿದರು. ಇವತ್ತಿಗೂ ಖರ್ಗೆ, ಪರಮೇಶ್ವರ್ ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ಬಿಡಲ್ಲ‌ ಎಂದರು.

ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದರೂ ಮುಸ್ಲಿಂ, ದಲಿತರಿಗೆ ಅಧಿಕಾರ ನೀಡಿದೆ. ಮುಸ್ಲಿಂ ಸಮುದಾಯದ ಅಬ್ದುಲ್ ಕಲಾಂರನ್ನು, ದಲಿತ ಸಮಾಜದ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಕೇಳದಿದ್ದರೂ ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದ ಸಂಸದರನ್ನಾಗಿಸಿದ್ದಲ್ಲದೆ ಕೇಂದ್ರ ಸಚಿವರನ್ನಾಗಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಣ್ಣ ಅರ್ಕಾವತಿ ಬಡಾವಣೆ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದರು.

ವಲಸೆ ಬಂದ ಶಾಸಕರ ಆತಂಕ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ. ಅವರೆಲ್ಲ
ಬಿಜೆಪಿಯಿಂದ ಶಾಸಕರಾಗಿದ್ದಾರೆ, ಪಕ್ಷದ ಒಂದು ಭಾಗ ಎಂದ ಅವರು, ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈಗವರು ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬದಲಾವಣೆ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ನಳೀನ್ ಕುಮಾರ ಕಟೀಲ್ ಹೇಳಿದರು.


Spread the love

LEAVE A REPLY

Please enter your comment!
Please enter your name here