ಹಾವೇರಿ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಆತಂಕ ದಿನೇದಿನೇ ಹೆಚ್ಚುತ್ತಿದೆ.
ಅದರಂತೆ ಹಾವೇರಿ ಜಿಲ್ಲೆಯ ಮೂಲದ ತಾಂತ್ರಿಕ ತಜ್ಞರೊಬ್ಬರ ಕುಟುಂಬ ಅಬುಧಾಬಿಯಲ್ಲಿ ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸದ್ಯ ಅಬುಧಾಬಿಯಲ್ಲಿ ನೆಲೆಸಿದ್ದಾರೆ.
ಅಲ್ಲಿನ ಪರಿಸ್ಥಿತಿ ಅತ್ಯಂತ ಭಯಾನಕವಾಗಿದ್ದು, ಕ್ಷಿಪಣಿ ದಾಳಿಯ ಪರಿಣಾಮ ಕಟ್ಟಡಗಳು ನಡುಗುತ್ತಿರುವ ಅನುಭವವಾಗುತ್ತಿದೆ ಎಂದು ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸ್ನಾನಗೃಹದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಬಾಗಿಲುಗಳು ತೀವ್ರವಾಗಿ ಅಲುಗಾಡುತ್ತಿವೆ. ನಾವು ಇರುವ ಕಟ್ಟಡದ ಮೇಲೆ ನಡೆದ ದಾಳಿಯ ದೃಶ್ಯ ಕಂಡು ಕೆಲ ಹೊತ್ತು ಭಯದಿಂದ ಸ್ಥಬ್ಧರಾಗಿದ್ದೆವು ಎಂದು ಅವರು ತಿಳಿಸಿದ್ದಾರೆ.
ಮೊದಲು ತಾವೊಬ್ಬರೇ ಅಬುಧಾಬಿಯಲ್ಲಿ ಕೆಲಸಕ್ಕಾಗಿ ನೆಲೆಸಿದ್ದೆ, ಒಂದು ತಿಂಗಳ ಹಿಂದಷ್ಟೇ ಪತ್ನಿ ಹಾಗೂ ಮಕ್ಕಳನ್ನು ಕರೆಸಿಕೊಂಡಿದ್ದೇನೆ. ಆದರೆ ಈಗ ಯುದ್ಧದ ಭೀತಿಯಿಂದ ಕುಟುಂಬದ ಸುರಕ್ಷತೆ ಬಗ್ಗೆ ಗಂಭೀರ ಚಿಂತೆ ಕಾಡುತ್ತಿದೆ. ಕೂಡಲೇ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬಳಿ ಮನವಿ ಮಾಡುತ್ತಿದ್ದೇವೆ ಎಂದು ರಾಘವೇಂದ್ರ ಕುದುರಿ ತಿಳಿಸಿದ್ದಾರೆ.



