ದಾವಣಗೆರೆ: ನ್ಯಾಮತಿ ತಾಲೂಕಿನ ಹೆಚ್. ಕಡದಕಟ್ಟೆ ಗ್ರಾಮದ ಸಮೀಪ ಸರ್ವೆ ಇಲಾಖೆಯ ಗುತ್ತಿಗೆ ನೌಕರನೊಬ್ಬ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತರನ್ನು 28 ವರ್ಷದ ಮಣಿಕಂಠ ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್ ಹಾಗೂ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಣಿಕಂಠ ಅವರು ಮೂರು ತಿಂಗಳ ಹಿಂದೆ ರಾಣೇಬೆನ್ನೂರು ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ದಾಂಪತ್ಯ ಜೀವನದಲ್ಲಿ ಉಂಟಾದ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜುಲೈ 17ರಂದು ಸಂಜೆ ಅವರು ತುಂಗಾ ನಾಲೆಗೆ ಹಾರಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ರಾತ್ರಿ ಪೂರ್ತಿ ನಡೆದ ಶೋಧ ಕಾರ್ಯಾಚರಣೆಯ ಬಳಿಕ ಮರುದಿನ ಬೆಳಗ್ಗೆ ಸಗಟೂರು ಗ್ರಾಮದ ಸಮೀಪ ಮೃತದೇಹ ಪತ್ತೆಯಾಯಿತು.
ಮೃತರ ಕುಟುಂಬಸ್ಥರು ಪತ್ನಿ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್‌ನೋಟ್ ಸೇರಿದಂತೆ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



