ಧಾರವಾಡ: ಅಣ್ಣಿಗೇರಿ ಪಟ್ಟಣದಲ್ಲಿ ಗ್ಯಾಸ್ ಗೀಸರ್ಗೆ ಸಂಪರ್ಕ ಕಲ್ಪಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದು, ಮನೆಯ ಒಂದು ಭಾಗಕ್ಕೂ ಭಾರೀ ಹಾನಿಯಾಗಿದೆ. ಘಟನೆ ಶನಿವಾರ ಮುಂಜಾನೆ ಸಂಭವಿಸಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಯೊಳಗೆ ಗ್ಯಾಸ್ ಸೋರಿಕೆಯ ವಾಸನೆ ಬರುತ್ತಿದ್ದುದನ್ನು ಮನೆ ಮಾಲೀಕ ಅಲ್ಲಾಬಕ್ಷ್ ಗಮನಿಸಿದ್ದರು. ಆದರೆ ಸೋರಿಕೆ ಬೇರೆ ಮೂಲದಿಂದ ಇರಬಹುದು ಎಂದು ಭಾವಿಸಿ ನಮಾಜ್ಗೆ ತೆರಳಿದ್ದರು. ಇದೇ ವೇಳೆ ಮನೆಯಲ್ಲಿದ್ದ ಪುತ್ರನೊಬ್ಬ ವಿದ್ಯುತ್ ದೀಪ ಹಚ್ಚುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಫೋಟದಲ್ಲಿ ಸಾಯಿರಾಬಾನು (54), ಅಬ್ಬಾಸ್ ಅಲಿ (29) ಹಾಗೂ ಹಸನ್ (26) ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯೊಳಗಿನ ವಸ್ತುಗಳು ಧ್ವಂಸಗೊಂಡಿದ್ದು, ಒಂದು ಗೋಡೆ ಕೂಡ ಕುಸಿದಿದೆ.
ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ಯಾಸ್ ಸೋರಿಕೆ ಹಾಗೂ ಸ್ಫೋಟಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



