ದಾವಣಗೆರೆ: ಆಹಾರವಿದೆ ಎಂದು ಭಾವಿಸಿ ಪ್ಲಾಸ್ಟಿಕ್ ಕವರ್ ಕಚ್ಚಿದ ಸಾಕುನಾಯಿ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಅರೆಕೇರೆ ರುದ್ರೇಶ್ ಅವರಿಗೆ ಸೇರಿದ ನಾಯಿ, ಜಮೀನಿಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಅನುಮಾನಾಸ್ಪದ ಪ್ಲಾಸ್ಟಿಕ್ ಕವರ್ ಅನ್ನು ಬಾಯಿಯಿಂದ ಕಚ್ಚಿದೆ. ತಕ್ಷಣವೇ ಕವರ್‌ನೊಳಗಿದ್ದ ಸ್ಫೋಟಕ ವಸ್ತು ಸಿಡಿದು, ನಾಯಿಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.
ಸ್ಫೋಟದ ಭಾರೀ ಶಬ್ದದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಕಾಡು ಹಂದಿಗಳನ್ನು ಬೇಟೆಯಾಡಲು ಅಥವಾ ಓಡಿಸಲು ಬಳಸುವ ಸಿಡಿಮದ್ದು ಮಾದರಿಯ ವಸ್ತು ಇದಾಗಿರಬಹುದು ಎಂದು ಶಂಕಿಸಲಾಗಿದೆ.
ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಫೋಟಕ ವಸ್ತುವಿನ ಅವಶೇಷಗಳನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸ್ಫೋಟದ ನಿಖರ ಕಾರಣ ತಿಳಿಯಲಿದೆ.
ನಿರಪರಾಧ ಪ್ರಾಣಿಯ ಸಾವಿಗೆ ಕಾರಣವಾದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



