ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ಯೋಜನೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳೊಂದಿಗೆ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭೈರಮಂಗಲಕ್ಕೆ ಬಂದು ರೈತರೊಂದಿಗೆ ನೇರವಾಗಿ ಮಾತನಾಡುವಂತೆ ಸವಾಲು ಹಾಕಿದ್ದಾರೆ.
ಮಾಜಿ ಶಾಸಕ ಮಾಗಡಿ ಮಂಜುನಾಥ್ ಹಾಗೂ ಜೆಡಿಎಸ್ನ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಟೌನ್ಶಿಪ್ ಯೋಜನೆ ಕುರಿತು ಏನೆಲ್ಲ ನಿರ್ಧಾರಗಳು ಕೈಗೊಳ್ಳಲಾಗಿತ್ತು ಹಾಗೂ ಕಾಂಗ್ರೆಸ್ ನಾಯಕರು ಆಗ ವ್ಯಕ್ತಪಡಿಸಿದ್ದ ನಿಲುವಿನ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು.
“2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಐದು ಕಡೆ ಟೌನ್ಶಿಪ್ ಯೋಜನೆ ಘೋಷಿಸಿದ್ದು ನಿಜ. ಆದರೆ 2007ರ ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಇದೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು” ಎಂದು ಕುಮಾರಸ್ವಾಮಿ ಹೇಳಿದರು.
ಅಂದು ಕಾಂಗ್ರೆಸ್ ನಾಯಕರು “ಇದು ಫಲವತ್ತಾದ ಕೃಷಿ ಭೂಮಿ, ರೈತರು ಭೂಮಿ ನೀಡಬಾರದು, ಇದು ರಿಯಲ್ ಎಸ್ಟೇಟ್ ಮಾಫಿಯಾದ ದಂಧೆ” ಎಂದು ಸದನದಲ್ಲಿ ಭಾಷಣ ಮಾಡಿದ್ದರು. ಆ ಭಾಷಣಗಳ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ತಿಳಿಸಿದರು.
ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1ರಂದು ವಿಧಾನಸಭೆಯಲ್ಲೇ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದ್ದೆ. ಅದರ ನಂತರ 2007ರ ಬಳಿಕ ಈ ಯೋಜನೆಯಲ್ಲಿ ತಮ್ಮ ಯಾವುದೇ ಪಾತ್ರ ಇರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ತಮ್ಮನ್ನು ಯೋಜನೆಯ ‘ಪಿತಾಮಹ’ ಎಂದು ಟೀಕಿಸುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಈ ಯೋಜನೆಗೆ ಸಂಬಂಧಿಸಿದಂತೆ ರೈತರ ಭೂಸ್ವಾಧೀನಕ್ಕೆ ನನ್ನ ಅವಧಿಯಲ್ಲಿ ಯಾವುದೇ ಆದೇಶ ಹೊರಡಿಸಲಿಲ್ಲ. 2025ರ ಮಾರ್ಚ್ 12ರಂದು ಮೊದಲ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವೇ. ಅಲ್ಲದೆ, ಈ ವರ್ಷದ ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಇದೇ ಸರ್ಕಾರ ಹೊರಡಿಸಿದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ?” ಎಂದು ಪ್ರಶ್ನಿಸಿದರು.
“ನನಗೆ ಈ ಯೋಜನೆ ಬಗ್ಗೆ ಆಸಕ್ತಿ ಅಥವಾ ಹಪಾಹಪಿ ಇದ್ದಿದ್ದರೆ, 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಅದನ್ನು ಜಾರಿಗೆ ತರಬಹುದಿತ್ತು. ಆದರೆ ಹಾಗೆ ಮಾಡಿಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.



