ಬೆಂಗಳೂರು: ಹಿಂದಿ ಮಾತನಾಡದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಆರೋಪ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ಕೇಳಿಬಂದಿದೆ. ಇಂದು ಮುಂಜಾನೆ ನಡೆದ ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತನನ್ನು 25 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಅವರು ಕ್ವಿಕ್-ಕಾಮರ್ಸ್ ಡೆಲಿವರಿ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವರಾಜ್ ಅವರು ಆರ್ಡರ್‌ವೊಂದನ್ನು ತಲುಪಿಸಿದ ಬಳಿಕ ಯಲಹಂಕ ನ್ಯೂ ಟೌನ್‌ನ 4ನೇ ಹಂತದಿಂದ ಸಂತೋಷ್ ನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 4.40ರ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲವು ಯುವತಿಯರು ತಮ್ಮನ್ನು ನಿಂದಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಇದರಿಂದಾಗಿ ಯುವತಿಯರ ಬಳಿ ತೆರಳಿದ ಬಸವರಾಜ್, ತಮಗೆ ಹಿಂದಿ ಭಾಷೆ ಬರುವುದಿಲ್ಲ. ಏಕೆ ನಿಂದಿಸುತ್ತಿದ್ದೀರಿ ಎಂಬುದನ್ನು ಕನ್ನಡದಲ್ಲಿ ತಿಳಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯರು ತಮ್ಮನ್ನು ಮತ್ತೆ ನಿಂದಿಸಿ, ಟೋಪಿಯನ್ನು ಎಳೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಬಸವರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಬಸವರಾಜ್ ಅವರು ಪೊಲೀಸ್ ಸಹಾಯವಾಣಿ 112ಕ್ಕೆ ಹಾಗೂ ತಮ್ಮ ಪರಿಚಯಸ್ಥ ಅಶೋಕ್ ಅವರಿಗೆ ಕರೆ ಮಾಡಿದ್ದಾರೆ. ಈ ನಡುವೆ ಬಸವರಾಜ್ ಅವರನ್ನು ತಡೆದ ಯುವತಿಯರು ಸ್ಥಳಕ್ಕೆ ಕೆಲವು ಯುವಕರನ್ನು ಕರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಸುಮಾರು ನಾಲ್ಕೈದು ಮಂದಿ ಯುವಕ-ಯುವತಿಯರು ಸೇರಿಕೊಂಡು ಬಸವರಾಜ್ ಮೇಲೆ ಕೈಗಳಿಂದ ಹಾಗೂ ರಸ್ತೆಯಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಬೆನ್ನು, ತಲೆ ಹಾಗೂ ಮೂಗಿನ ಭಾಗಕ್ಕೆ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಸವರಾಜ್ ಅವರನ್ನು ರಕ್ಷಿಸಲು ಅಶೋಕ್ ಮಧ್ಯಪ್ರವೇಶಿಸಿದಾಗ ಅವರ ತಲೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ್ ತಿಳಿಸಿದ್ದಾರೆ.
ಬಸವರಾಜ್ ನೀಡಿದ ದೂರಿನ ಆಧಾರದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಗುರುತಿಸದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ಗಳಾದ 118(1), 126(2), 351(2), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದ್ದು, ಹಲ್ಲೆ ನಡೆಸಿದ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.



