ಗದಗ: ಬರಗಾಲದ ಸಂಕಷ್ಟದಿಂದ ಕಂಗೆಟ್ಟಿರುವ ಅನ್ನದಾತರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಉದ್ದೇಶದಿಂದ ರೈತರೊಂದಿಗೆ ದೀಪಾವಳಿ ಆಚರಿಸಲು ಅನಿಲ ಪಿ. ಮೆಣಸಿನಕಾಯಿ ಮುಂದಾಗಿದ್ದಾರೆ. ಗದಗ ತಾಲ್ಲೂಕಿನ ಹರ್ತಿ ಗ್ರಾಮದ ತೇರಿನ ಬಯಲಿನಲ್ಲಿ ನವೆಂಬರ್ 13ರಂದು ಮಹಾಲಕ್ಷ್ಮಿ ಪೂಜೆ, ಉತ್ತಮ ಮಳೆಗಾಗಿ ವಿಶೇಷ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಅನಿಲ ಪಿ. ಮೆಣಸಿನಕಾಯಿ, ರೈತರ ಸಮೃದ್ಧಿ ಹಾಗೂ ಕೃಷಿ ಚಟುವಟಿಕೆಗಳ ಒಳಿತಿಗಾಗಿ ಮಹಾಲಕ್ಷ್ಮಿ ಪೂಜೆ ಮತ್ತು ಮಳೆಗಾಗಿ ಹೋಮ ನೆರವೇರಿಸಲಾಗುವುದು. ಬೆಳಿಗ್ಗೆ 11 ಗಂಟೆಗೆ ಪೂಜಾ ಕಾರ್ಯಕ್ರಮ ಆರಂಭವಾಗಲಿದೆ. ಪೂಜೆ ನಡೆಯುವ ಸ್ಥಳಕ್ಕೆ ಕುಂಭ ಹೊತ್ತ ಮಹಿಳೆಯರು ಹಾಗೂ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ದೀಪಾವಳಿ ಅಂಗವಾಗಿ ಹಾಲುಮತ ಸಮಾಜದ ಸಂಪ್ರದಾಯದಂತೆ ಹಟ್ಟಿ ಪೂಜೆ, ಗೋಪೂಜೆ ಹಾಗೂ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ರೈತರಿಗೆ ಸನ್ಮಾನ ಹಾಗೂ ರೈತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಲ್ಲಾಪುರದಿಂದ ತರಿಸಲಾದ ಮಹಾಲಕ್ಷ್ಮಿ ಮೂರ್ತಿಗೆ ರಾತ್ರಿ 8 ಗಂಟೆಯವರೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗುತ್ತದೆ. ಒಡಿಶಾದ ಪುರಿ ಕ್ಷೇತ್ರದ ಪಂಡಿತರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಡಲಿದ್ದು, ನಯಾನಗರ ಸಿದ್ಧ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮೂರು ಹೊತ್ತು ದಾಸೋಹ ಸೇವೆಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಹಿಂಗಾರು ಮಳೆಯ ಕೊರತೆಯ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬರಪೀಡಿತ ತಾಲ್ಲೂಕುಗಳ ಘೋಷಣೆ ವಿಳಂಬವಾಗಿದ್ದು, ಬೆಳೆನಷ್ಟ ಪರಿಹಾರವಾಗಿ ಎಕರೆಗೆ ಕನಿಷ್ಠ ₹20 ಸಾವಿರ ನೀಡಬೇಕೆಂಬ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು.
ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಖುದ್ದಾಗಿ ಬೆಳೆಹಾನಿ ವೀಕ್ಷಿಸಿದರೂ ರೈತರಿಗೆ ನಿರೀಕ್ಷಿತ ನೆರವು ದೊರೆತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬಳಸಬಹುದಿತ್ತು. ರೈತರ ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ನಿಲ್ಲಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಎಲ್ಲ ಪಕ್ಷಗಳ ಮುಖಂಡರು, ರೈತರು, ರೈತ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿದೆ ಎಂದು ಹೇಳಿದರು.
ಮುಖಂಡರಾದ ರವಿ ಗುಂಜೀಕರ ಹಾಗೂ ರವಿಕಾಂತ ಅಂಗಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಪಡಗದ, ಕೆ.ವಿ.ಗದುಗಿನ, ರಾಘವೇಂದ್ರ ಯಳವತ್ತಿ, ಚಂದ್ರು ಹರಿಜನ, ಶರಣಪ್ಪ ಚಿಂಚಲಿ, ರಮೇಶ್ ಸಜ್ಜಗಾರ ಸೇರಿದಂತೆ ಅನೇಕರಿದ್ದರು.
ರೈತರ ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ. ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕು, ಅನ್ನದಾತರ ಬದುಕಿನಲ್ಲಿ ಸಮೃದ್ಧಿ ನೆಲೆಸಬೇಕು ಎಂಬ ಆಶಯದಿಂದ ರೈತರೊಂದಿಗೆ ದೀಪಾವಳಿ ಆಚರಿಸುವ ಸಂಕಲ್ಪ ಮಾಡಿದ್ದೇವೆ.
— ಅನಿಲ ಪಿ. ಮೆಣಸಿನಕಾಯಿ, ಕಾರ್ಯಕ್ರಮದ ಆಯೋಜಕರು









