ಮಧುಮೇಹ ಇರುವವರು ಆಹಾರದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಅದರಲ್ಲೂ ಬೆಳಗಿನ ಉಪಾಹಾರ ದಿನದ ಆರಂಭದ ಪ್ರಮುಖ ಆಹಾರವಾಗಿರುವುದರಿಂದ ಏನು ತಿನ್ನಬೇಕು ಎಂಬ ಗೊಂದಲ ಹಲವರಲ್ಲಿರುತ್ತದೆ. ಕೆಲವರು ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕಿದ್ದನ್ನು ತಿಂದರೆ, ಇನ್ನು ಕೆಲವರು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು ಎಂಬ ಆತಂಕದಿಂದ ಉಪಾಹಾರವನ್ನೇ ಕಡಿಮೆ ಮಾಡುತ್ತಾರೆ. ಆದರೆ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳಬಹುದು.
ಬೆಳಗ್ಗೆ ಸಕ್ಕರೆ ಪ್ರಮಾಣ ಏಕೆ ಹೆಚ್ಚಾಗುತ್ತದೆ?
ಮಧುಮೇಹ ಇರುವ ಕೆಲವರಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಕಂಡುಬರುತ್ತದೆ. ಇದಕ್ಕೆ ‘ಡಾನ್ ಫಿನಾಮಿನನ್’ (Dawn Phenomenon) ಒಂದು ಕಾರಣವಾಗಿರಬಹುದು. ಮುಂಜಾನೆ ದೇಹದಲ್ಲಿ ಕಾರ್ಟಿಸೋಲ್ ಮತ್ತು ಗ್ರೋತ್ ಹಾರ್ಮೋನ್ಗಳಂತಹ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ. ಇದರಿಂದ ಯಕೃತ್ತು ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಬಿಡುಗಡೆ ಮಾಡಬಹುದು. ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳಿರಲಿ:
ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಮತ್ತು ನಾರಿನಂಶ ಹೆಚ್ಚಿರುವ ಆಹಾರಗಳಿಗೆ ಆದ್ಯತೆ ನೀಡುವುದು ಉತ್ತಮ. ಇವು ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು.
- ಮೊಟ್ಟೆ: ಬೇಯಿಸಿದ ಮೊಟ್ಟೆ ಅಥವಾ ಕಡಿಮೆ ಎಣ್ಣೆಯಲ್ಲಿ ತಯಾರಿಸಿದ ಮೊಟ್ಟೆಯ ಆಮ್ಲೆಟ್ ಸೇವಿಸಬಹುದು. ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ದೊರೆಯುತ್ತದೆ.
- ಪನೀರ್: ಸಸ್ಯಾಹಾರಿಗಳಿಗೆ ಪನೀರ್ ಉತ್ತಮ ಪ್ರೋಟೀನ್ ಮೂಲವಾಗಿದೆ. ತರಕಾರಿಗಳೊಂದಿಗೆ ಪನೀರ್ ಭುರ್ಜಿ ತಯಾರಿಸಿಕೊಂಡು ಸೇವಿಸಬಹುದು.
- ಮೊಳಕೆ ಕಾಳುಗಳು: ಹೆಸರುಕಾಳು ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ ತಿನ್ನಬಹುದು. ಇವುಗಳಲ್ಲಿ ಪ್ರೋಟೀನ್ ಮತ್ತು ನಾರಿನಂಶ ಇರುತ್ತದೆ.
- ಚಿಲ್ಲಾ: ಕಡಲೆಹಿಟ್ಟು ಅಥವಾ ಹೆಸರುಬೇಳೆಯಿಂದ ತಯಾರಿಸುವ ಚಿಲ್ಲಾಗೆ ತರಕಾರಿಗಳನ್ನು ಸೇರಿಸಿಕೊಂಡು ಸೇವಿಸಬಹುದು.
- ಮೊಸರು ಮತ್ತು ಬೀಜಗಳು: ಸಕ್ಕರೆ ಸೇರಿಸದ ಮೊಸರಿನೊಂದಿಗೆ ಬಾದಾಮಿ, ಅಗಸೆ ಬೀಜ ಅಥವಾ ಇತರ ಬೀಜಗಳನ್ನು ಮಿತವಾಗಿ ಸೇವಿಸಬಹುದು.
ಜ್ಯೂಸ್ ಬದಲು ಇಡೀ ಹಣ್ಣು ತಿನ್ನಿ:
ಮಧುಮೇಹ ಇರುವವರು ಹಣ್ಣುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ಹಣ್ಣಿನ ಜ್ಯೂಸ್ ಕುಡಿಯುವುದಕ್ಕಿಂತ ಇಡೀ ಹಣ್ಣನ್ನು ತಿನ್ನುವುದು ಉತ್ತಮ. ಜ್ಯೂಸ್ ಮಾಡುವಾಗ ಹಣ್ಣಿನಲ್ಲಿರುವ ನಾರಿನಂಶ ಕಡಿಮೆಯಾಗಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ಸಂಪೂರ್ಣ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.
ತಿಂಡಿ ಬಳಿಕ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ:
ಬೆಳಗಿನ ಉಪಾಹಾರ ಸೇವಿಸಿದ ತಕ್ಷಣ ಒಂದೇ ಕಡೆ ಕುಳಿತುಕೊಳ್ಳುವ ಬದಲು ಸ್ವಲ್ಪ ಹೊತ್ತು ನಡೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಊಟದ ಬಳಿಕ ನಡೆಯುವುದರಿಂದ ಸ್ನಾಯುಗಳು ರಕ್ತದಲ್ಲಿರುವ ಗ್ಲೂಕೋಸ್ ಬಳಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದನ್ನು ನಿಯಂತ್ರಿಸಲು ನೆರವಾಗಬಹುದು.
ಇದರ ಜೊತೆಗೆ ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಕೂಡ ಮುಖ್ಯ. ಉಪಾಹಾರದಲ್ಲಿ ಮಾಡುವ ಬದಲಾವಣೆಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಬಹುದು. ಆದರೆ ಆಹಾರ ಅಥವಾ ಔಷಧಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.










