ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಪ್ರತ್ಯೇಕವಾಗುತ್ತಿರುವುದಾಗಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ ಎನ್ನಲಾಗಿದೆ. 13 ವರ್ಷಗಳ ದಾಂಪತ್ಯ ಜೀವನದ ಬಳಿಕ ಪರಸ್ಪರ ಗೌರವದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ಇಬ್ಬರೂ ಒಟ್ಟಾಗಿ ಜವಾಬ್ದಾರಿ ನಿರ್ವಹಿಸುವುದಾಗಿಯೂ ಹೇಳಿದ್ದಾರೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ ಪವನ್ ಕಲ್ಯಾಣ್ ಅವರ ಹಿಂದಿನ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಬಂದಿವೆ. ಈ ಹಿಂದೆ ನಡೆದಿದ್ದ ಚಾಟ್ ಶೋವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದ ಅವರು, ತಮಗೆ ಬ್ರಹ್ಮಚಾರಿಯಾಗಿ ಉಳಿಯುವ ಆಸೆ ಇತ್ತು ಎಂದು ಹೇಳಿಕೊಂಡಿದ್ದರು. ಯೋಗ ಮಾರ್ಗದಲ್ಲಿ ಸಾಗುವ ಬಯಕೆ ಹೊಂದಿದ್ದ ತಮ್ಮ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದರು.
ಮೂರು ಮದುವೆಗಳ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು?
ತಮ್ಮ ಮೂರು ಮದುವೆಗಳ ವಿಚಾರವಾಗಿ ವ್ಯಕ್ತವಾಗಿದ್ದ ಟೀಕೆಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಪವನ್ ಕಲ್ಯಾಣ್, ತಾವು ಒಂದೇ ಸಮಯದಲ್ಲಿ ಮೂವರನ್ನು ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಒಂದು ಸಂಬಂಧ ಸರಿಯಾಗಿ ಮುಂದುವರಿಯದ ಸಂದರ್ಭದಲ್ಲಿ ಮತ್ತೊಂದು ಮದುವೆಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ತಮ್ಮ ವೈಯಕ್ತಿಕ ಜೀವನದ ನೋವನ್ನು ಹಂಚಿಕೊಂಡಿದ್ದರು.
ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದ ಹಿನ್ನೆಲೆ
ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಈ ಸಂಬಂಧ ಮುರಿದುಬಿದ್ದ ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾದರು. ನಂತರ 2012ರಲ್ಲಿ ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದ ಅವರು, 2013ರಲ್ಲಿ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು.
ವಿಚ್ಛೇದನದ ಬಗ್ಗೆ ರೇಣು ದೇಸಾಯಿ ಬೇಸರ
ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅವರ ಎರಡನೇ ಪತ್ನಿ ರೇಣು ದೇಸಾಯಿ ಕೂಡ ತಮ್ಮ ಹಳೆಯ ವಿಚ್ಛೇದನದ ವಿಚಾರವಾಗಿ ಮಾತನಾಡಿದ್ದರು. ವಿಚ್ಛೇದನವಾಗಿ 14 ವರ್ಷಗಳು ಕಳೆದಿದ್ದರೂ ಜನರು ಇಂದಿಗೂ ಅದೇ ವಿಚಾರಕ್ಕೆ ತಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಶ್ರೀರಾಮನ ವನವಾಸವೂ 14 ವರ್ಷಗಳ ಬಳಿಕ ಮುಗಿದಿತ್ತು. ಆದರೆ ತಮ್ಮ ವನವಾಸ ಯಾವಾಗ ಮುಗಿಯುತ್ತದೆಯೋ ಎಂದು ನೋವು ತೋಡಿಕೊಂಡಿದ್ದರು. ಇದೀಗ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಪ್ರತ್ಯೇಕವಾಗುತ್ತಿರುವ ಸುದ್ದಿ ಮತ್ತೆ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.









