ಬೆಂಗಳೂರು: ಯೋಗ ಇಂದು ಭಾರತವನ್ನು ಅರ್ಥಮಾಡಿಕೊಳ್ಳುವ ಪ್ರಮುಖ ದ್ವಾರವಾಗಿ ಬೆಳೆದಿದೆ. ಜಗತ್ತಿನ ಹಲವು ರಾಷ್ಟ್ರಗಳು ಯೋಗದ ಮಹತ್ವವನ್ನು ಅರಿತು ಅದನ್ನು ತಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಜಾಗತಿಕ ವಿಸ್ತರಣೆ ಹಾಗೂ ಅದರ ಭಾರತೀಯ ಮೂಲಗಳ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಶಾಂತಿ ಕುಟೀರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಎಸ್-ವ್ಯಾಸ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಡಳಿತ ಭವನ ಹಾಗೂ ಗೇಲ್ ಸಂಸ್ಥೆಯ ಸಂಕುಚಿತ ಜೈವಿಕ ಅನಿಲ (CBG) ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಬೆಳವಣಿಗೆಗೆ ಭಾರತದ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ವರನಟ ಡಾ. ರಾಜ್ಕುಮಾರ್ ಅವರನ್ನು ಪ್ರಧಾನಿ ಮೋದಿ ವಿಶೇಷವಾಗಿ ಸ್ಮರಿಸಿದರು. ಡಾ. ರಾಜ್ಕುಮಾರ್ ಅವರು ಯೋಗ ಸಾಧಕರಾಗಿದ್ದರು ಎಂದು ನೆನಪಿಸಿಕೊಂಡರು. ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸರ್ಕಾರ್ಯವಾಹ ಎಚ್.ವಿ. ಶೇಷಾದ್ರಿ ಅವರ ಸೇವೆ ಮತ್ತು ಸಮಾಜದ ಮೇಲಿನ ಅವರ ಅರ್ಪಣಾ ಮನೋಭಾವವನ್ನು ಗುಣಗಾನ ಮಾಡಿದರು.
ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರೇರಣೆ ಪಡೆದು ಎಸ್-ವ್ಯಾಸದಂತಹ ಯೋಗ ಸಂಸ್ಥೆಗಳ ಸ್ಥಾಪನೆಗೆ ಸ್ಫೂರ್ತಿ ದೊರೆಯಿತು ಎಂದು ಪ್ರಧಾನಿ ಹೇಳಿದರು. ಪ್ರಶಾಂತಿ ಕುಟೀರದಂತಹ ಸಂಸ್ಥೆಗಳು ಯೋಗ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ವೈಜ್ಞಾನಿಕ ಸಂಶೋಧನೆ, ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ಸಮಸ್ಯೆಗಳ ನಿರ್ವಹಣೆ ಮತ್ತು ಸಮಗ್ರ ಆರೋಗ್ಯ ಸೇವೆಗಳಲ್ಲಿ ಇಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ಕುರಿತು ಮಾತನಾಡಿದ ಮೋದಿ, ಭಾರತದ ಮುಂದಾಳತ್ವದಿಂದಾಗಿ ಇಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಆಫ್ರಿಕಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಯೋಗ ಹಾಗೂ ಆಯುಷ್ ಕ್ಷೇತ್ರಗಳ ಅಭಿವೃದ್ಧಿಗಾಗಿ ಭಾರತದ ಆಯುಷ್ ಸಚಿವಾಲಯದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ತಿಳಿಸಿದರು.
ತಾವು ವಿದೇಶಗಳಿಗೆ ಭೇಟಿ ನೀಡಿದಾಗಲೂ ಯೋಗದ ಕುರಿತು ಚರ್ಚೆಗಳು ನಡೆಯುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಮಧ್ಯಾಹ್ನದ ಊಟ ಅಥವಾ ರಾತ್ರಿ ಭೋಜನದ ಸಂದರ್ಭದಲ್ಲಿಯೂ ಅನೇಕ ದೇಶಗಳ ಜನರು ತಮ್ಮೊಂದಿಗೆ ಯೋಗದ ಬಗ್ಗೆ ಮಾತನಾಡುತ್ತಾರೆ. ಯೋಗ ಈಗ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು, ಹಲವು ರಾಷ್ಟ್ರಗಳು ಯೋಗ ಸ್ಪರ್ಧೆಗಳನ್ನು ಆಯೋಜಿಸುತ್ತಿವೆ ಎಂದು ತಿಳಿಸಿದರು.








