ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ನಲ್ಲಿ ನಡೆದಿದೆ. ಪತ್ನಿಯ ಕಣ್ಣೆದುರೇ ಐದಾರು ಮಂದಿಯ ಗ್ಯಾಂಗ್ ಉದ್ಯಮಿ ಮೇಲೆ ದಾಳಿ ನಡೆಸಿ ಕೊಲೆ ಮಾಡಿದೆ ಎನ್ನಲಾಗಿದೆ. ಚರಣ್ ಗೌಡ (39) ಹತ್ಯೆಯಾದ ಉದ್ಯಮಿ.

ಯಲಹಂಕ ನ್ಯೂ ಟೌನ್ನ ಖಾಸಗಿ ಕಾಲೇಜು ಸಮೀಪದಲ್ಲಿರುವ ಖಾಸಗಿ ಬ್ಯಾಂಕ್ ಮುಂಭಾಗದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ. ಧಣಿ ಪ್ರಾಪರ್ಟೀಸ್ ಮಾಲೀಕರಾಗಿದ್ದ ಚರಣ್ ಗೌಡ, ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಯಲಹಂಕ ಭಾಗದಲ್ಲಿ ಜಮೀನು ಮತ್ತು ಸೈಟ್ಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ಮಾಹಿತಿಯ ಪ್ರಕಾರ, ಚರಣ್ ಗೌಡ ಅವರು ಬೆಳಗ್ಗೆ ಪತ್ನಿಯೊಂದಿಗೆ ಮನೆಯಿಂದ ತಮ್ಮ ಕಚೇರಿಗೆ ಬಂದಿದ್ದರು. ಬ್ಯಾಂಕ್ ಕಟ್ಟಡದ ಮೇಲಿನ ಮಹಡಿಯಲ್ಲಿ ಅವರ ಕಚೇರಿ ಇತ್ತು. ಪತ್ನಿ ಕಚೇರಿಯತ್ತ ತೆರಳುವುದನ್ನೇ ಕಾಯುತ್ತಿದ್ದ ದುಷ್ಕರ್ಮಿಗಳ ತಂಡ, ಬಳಿಕ ಚರಣ್ ಗೌಡ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ.
ಐದಾರು ಮಂದಿ ಯುವಕರ ಗ್ಯಾಂಗ್ ಮಾರಕಾಸ್ತ್ರಗಳಿಂದ ಚರಣ್ ಗೌಡ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಭೀಕರವಾಗಿ ಹಲ್ಲೆ ನಡೆಸಿದೆ. ಕೆಲವೇ ಸೆಕೆಂಡ್ಗಳಲ್ಲಿ ಕೃತ್ಯ ಎಸಗಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪತ್ನಿಯ ಎದುರೇ ಪತಿ ಹತ್ಯೆಯಾಗಿದ್ದರಿಂದ ಅವರು ಸ್ಥಳದಲ್ಲೇ ಕಣ್ಣೀರಿಡುತ್ತಾ ಗೋಳಾಡಿದ್ದಾರೆ. ಕಾರು ತೆಗೆಯುವಂತೆ ಹಾಗೂ ಅಲ್ಲಿಂದ ತೆರಳುವಂತೆ ಪತಿಯನ್ನು ಕೂಗಿ ಕರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು ಎನ್ನಲಾಗಿದೆ.
ಇನ್ನು ಈ ಹತ್ಯೆಗೆ ಹಳೆ ದ್ವೇಷವೇ ಕಾರಣವೇ ಅಥವಾ ಜಮೀನು ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೇ ಹಿನ್ನೆಲೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಲ್ಯಾಂಡ್ ವಿಚಾರವಾಗಿ ಉಂಟಾಗಿದ್ದ ಕಿರಿಕ್ನಿಂದ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಶಂಕೆಯೂ ವ್ಯಕ್ತವಾಗಿದೆ. ಆದರೆ ಕೊಲೆಯ ಹಿಂದಿನ ನಿಖರ ಕಾರಣ ಇನ್ನೂ ತನಿಖೆಯಿಂದ ತಿಳಿದುಬರಬೇಕಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೃತರ ಪತ್ನಿಯಿಂದಲೂ ಹಂತಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದು, ಹತ್ಯೆ ನಡೆಸಿ ಪರಾರಿಯಾಗಿರುವ ಗ್ಯಾಂಗ್ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.









