ಬೆಂಗಳೂರು: ಯೋಗವನ್ನು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತಗೊಳಿಸದೆ, ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರಗಳೊಂದಿಗೆ ಬೆಸೆಯುವ ಮೂಲಕ ಮಹತ್ವದ ಕೊಡುಗೆ ನೀಡಿರುವ ಬೆಂಗಳೂರಿನ ಪ್ರಶಾಂತಿ ಕುಟೀರ ಇದೀಗ 50 ವರ್ಷಗಳ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಸಂಸ್ಥೆಯ ಐದು ದಶಕಗಳ ಸಾಧನೆಗೆ ಮತ್ತಷ್ಟು ಮಹತ್ವ ಸಿಕ್ಕಿದೆ.

1975ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಕುಟೀರವು ಭಾರತದ ಪ್ರಾಚೀನ ಆಧ್ಯಾತ್ಮಿಕ ಜ್ಞಾನ ಪರಂಪರೆ ಮತ್ತು ಆಧುನಿಕ ವಿಜ್ಞಾನದ ನಡುವೆ ಸೇತುವೆ ನಿರ್ಮಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಇದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ)ದ ಪ್ರಮುಖ ವಸತಿ ಕೇಂದ್ರವಾಗಿದೆ. ಯೋಗ ಶಿಕ್ಷಣ ಮತ್ತು ಸಂಶೋಧನೆಗೆ ವಿಶೇಷ ಒತ್ತು ನೀಡುತ್ತಿರುವ ಎಸ್-ವ್ಯಾಸ ಸಂಸ್ಥೆಗೆ 2002ರಲ್ಲಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದೆ.
ಯೋಗದ ವೈಜ್ಞಾನಿಕ ಅಧ್ಯಯನ ಪ್ರಶಾಂತಿ ಕುಟೀರದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ಸಮಗ್ರ ಆರೋಗ್ಯದ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ಹಲವು ಸಂಶೋಧನೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಯೋಗ ಚಿಕಿತ್ಸಾ ಶಿಕ್ಷಣ ಸೇರಿದಂತೆ ವಿವಿಧ ಕೋರ್ಸ್ಗಳ ಮೂಲಕ ಯೋಗ ಕ್ಷೇತ್ರಕ್ಕೆ ಪರಿಣತ ಮಾನವ ಸಂಪನ್ಮೂಲವನ್ನು ರೂಪಿಸುವ ಪ್ರಯತ್ನವೂ ನಡೆಯುತ್ತಿದೆ.
ಇನ್ನು ಪ್ರಶಾಂತಿ ಕುಟೀರದ ಆವರಣದಲ್ಲಿರುವ ಆರೋಗ್ಯಧಾಮವು ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ಸಂಯೋಜಿಸಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳೊಂದಿಗೆ ಆಧುನಿಕ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ.
ನವೆಂಬರ್ 13ರಿಂದ 23ರವರೆಗೆ ನಡೆಯುತ್ತಿರುವ ಸುವರ್ಣ ಮಹೋತ್ಸವಕ್ಕೆ ‘ವಿಕಸಿತ ಭಾರತ 2047 ಕಡೆಗೆ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಸುವರ್ಣ ಮಹೋತ್ಸವ ಆಡಳಿತಾತ್ಮಕ ಕಟ್ಟಡಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ, ಕೇರಳದ ತಿರುವನಂತಪುರದಲ್ಲಿ ಎಸ್-ವ್ಯಾಸದ ಆಫ್-ಕ್ಯಾಂಪಸ್ಗೂ ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮವು ಮತ್ತೊಂದು ವಿಶೇಷ ಕಾರಣಕ್ಕೂ ಮಹತ್ವ ಪಡೆದಿದೆ. 1926ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಜನ್ಮ ಶತಮಾನೋತ್ಸವವನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತಿದೆ. 1946ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಗೊಂಡಿದ್ದ ಅವರು, 1987ರಿಂದ 2000ರವರೆಗೆ ಸಂಘದ ಸರ್ಕಾರ್ಯವಾಹರಾಗಿ ಸೇವೆ ಸಲ್ಲಿಸಿದ್ದರು.
ಎಸ್-ವ್ಯಾಸ ಸಂಸ್ಥೆಯ ಹಿಂದಿನ ಪ್ರಮುಖ ದೃಷ್ಟಾರರಲ್ಲಿ ಒಬ್ಬರಾಗಿದ್ದ ಶೇಷಾದ್ರಿ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ಪ್ರಶಾಂತಿ ಕುಟೀರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.










