HomeKarnataka Newsಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಶುಲ್ಕ ಸಂಗ್ರಹಿಸಿದರೆ ಲಂಚವಲ್ಲ; ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಹೈಕೋರ್ಟ್‌...

ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಶುಲ್ಕ ಸಂಗ್ರಹಿಸಿದರೆ ಲಂಚವಲ್ಲ; ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಹೈಕೋರ್ಟ್‌ ರಿಲೀಫ್

ಬೆಂಗಳೂರು: ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಮುದ್ರಾಂಕ ಶುಲ್ಕ ಸಂಗ್ರಹಿಸಿ, ಅದನ್ನು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿದ್ದರೆ ಅದನ್ನು ಲಂಚ ಅಥವಾ ಅಕ್ರಮ ಹಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ 68 ವರ್ಷದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ತಡೆಹಿಡಿಯಲಾಗಿದ್ದ ಅವರ ಸಂಪೂರ್ಣ ಪಿಂಚಣಿಯನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಕೆ.ಜಿ. ಶಾಂತಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಪಡಿಸಿದೆ.

1999ರ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ಕಾಯ್ದೆ ಹಾಗೂ ಸರ್ಕಾರದ ಸುತ್ತೋಲೆಯ ಪ್ರಕಾರ ಕೃಷಿ ಜಮೀನು ವಿಭಜನೆಯ ಸಂದರ್ಭದಲ್ಲಿ ಪ್ರತಿ ಭಾಗಕ್ಕೆ ₹250ರಂತೆ ಮುದ್ರಾಂಕ ಶುಲ್ಕ ಸಂಗ್ರಹಿಸುವುದು ಕಡ್ಡಾಯವಾಗಿತ್ತು. ಅರ್ಜಿದಾರರು ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಸಂಗ್ರಹಿಸಿ, ಅದಕ್ಕೆ ಸೂಕ್ತ ರಸೀದಿ ನೀಡಿ ಅಧಿಕೃತ ಖಜಾನೆಗೆ ಹಣ ಜಮೆ ಮಾಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.

ಸರ್ಕಾರದ ನಿಯಮದಂತೆ ಕಾನೂನುಬದ್ಧವಾಗಿ ಶುಲ್ಕ ಸಂಗ್ರಹಿಸುವುದನ್ನು ‘ಲಂಚ’ ಅಥವಾ ‘ಅಕ್ರಮ ಸ್ವತ್ತು’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದನ್ನು ಕರ್ತವ್ಯಲೋಪವೆಂದೂ ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವಿ.ಎಸ್. ಅಲ್ಬಾಲ್ ಅವರು 2012ರಲ್ಲಿ ನಿವೃತ್ತರಾಗಿದ್ದರು. ಅದಕ್ಕೂ ಮುನ್ನ 1999ರಲ್ಲಿ ಬಿಳಗಿ ತಾಲೂಕಿನಲ್ಲಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವೇಳೆ ಹಂಚಿನಾಳ ಗ್ರಾಮದ ಮಹದೇವಪ್ಪ ಸಂಗಪ್ಪ ಕಂಬೋಗಿ ಅವರು ತಮ್ಮ ಹಾಗೂ ಇಬ್ಬರು ಮಕ್ಕಳ ಹೆಸರಿಗೆ ಜಮೀನು ಖಾತೆ ಬದಲಾವಣೆ ಮಾಡುವಂತೆ 1999ರ ಮೇ 18ರಂದು ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಮುದ್ರಾಂಕ ಶುಲ್ಕ ಪಾವತಿಸುವಂತೆ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಅಲ್ಬಾಲ್ ಸೂಚಿಸಿದ್ದರು.

ಆದರೆ, ದೂರುದಾರರು ಈ ಮೊತ್ತವನ್ನು ಲಂಚದ ಬೇಡಿಕೆ ಎಂದು ತಪ್ಪಾಗಿ ಭಾವಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅರ್ಜಿದಾರರನ್ನು ಖುಲಾಸೆಗೊಳಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಉಪಲೋಕಾಯುಕ್ತರ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ಹೇಳಿ ಸರ್ಕಾರ ಅಲ್ಬಾಲ್ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಲೋಕಾಯುಕ್ತ ವರದಿಯನ್ನು ರದ್ದುಪಡಿಸಿ, ಅವರನ್ನು ಸೇವೆಗೆ ಮರುಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸಲು ಅವಕಾಶ ನೀಡಿತ್ತು.

ಮರು ವಿಚಾರಣೆ ವೇಳೆ ಉಪಲೋಕಾಯುಕ್ತರ ಮುಂದೆ ಹಾಜರಾದ ಅಲ್ಬಾಲ್, ದೂರುದಾರರಿಂದ ಸಂಗ್ರಹಿಸಿದ್ದ ₹750 ಮುದ್ರಾಂಕ ಶುಲ್ಕವಾಗಿದ್ದು, ಅದನ್ನು ಸರ್ಕಾರದ ಖಜಾನೆಗೆ ಜಮೆ ಮಾಡಿರುವುದಾಗಿ ದಾಖಲೆಗಳ ಸಮೇತ ವಿವರಿಸಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಉಪಲೋಕಾಯುಕ್ತರು ಅವರ ಶೇ.50ರಷ್ಟು ಪಿಂಚಣಿಯನ್ನು ಶಾಶ್ವತವಾಗಿ ತಡೆಹಿಡಿಯುವಂತೆ ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರವೂ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಲ್ಬಾಲ್ ಮತ್ತೆ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಸರ್ಕಾರದ ನಿಯಮದಂತೆ ಸಂಗ್ರಹಿಸಿ ಖಜಾನೆಗೆ ಜಮೆ ಮಾಡಿರುವ ಮುದ್ರಾಂಕ ಶುಲ್ಕವನ್ನು ಲಂಚವೆಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ. ಅಲ್ಲದೆ, ತಡೆಹಿಡಿಯಲಾಗಿದ್ದ ಸಂಪೂರ್ಣ ಪಿಂಚಣಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img