ಬೆಂಗಳೂರು: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಎಥೆನಾಲ್ ಮಿಶ್ರಣದಿಂದ ದೇಶಕ್ಕೆ ಭಾರಿ ಆರ್ಥಿಕ ಲಾಭವಾಗಿದೆ. ವಾಹನಗಳ ಮೈಲೇಜ್ ಕುಸಿತಕ್ಕೆ ಎಥೆನಾಲ್ ಕಾರಣವಲ್ಲ, ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಎಥೆನಾಲ್ ಮಿಶ್ರಣದಿಂದ ದೇಶಕ್ಕೆ 1.90 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. ಅಲ್ಲದೆ, 310 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಬಳಕೆ ಕಡಿಮೆಯಾಗಿದ್ದು, 930 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಇದರಿಂದ ರೈತರಿಗೆ 1.60 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಲಭಿಸಿದೆ. ಹೀಗಾಗಿ ಎಥೆನಾಲ್ ಮಿಶ್ರಣದಿಂದ ದೇಶಕ್ಕೆ ಆರ್ಥಿಕ ಹಾಗೂ ಪರಿಸರದ ದೃಷ್ಟಿಯಿಂದ ಅನುಕೂಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮೈಲೇಜ್ ಕಡಿಮೆಯಾಗಲು ರಸ್ತೆ ಗುಂಡಿಗಳೇ ಕಾರಣ!
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, ರಾಜ್ಯದ ರಸ್ತೆಗಳ ದುಸ್ಥಿತಿಯತ್ತ ಗಮನ ಸೆಳೆದಿದ್ದಾರೆ.
ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 18 ಕಿಲೋಮೀಟರ್ನಿಂದ 11 ಕಿಲೋಮೀಟರ್ಗೆ ಇಳಿದಿದೆ. ಇದಕ್ಕೆ ರಸ್ತೆಗಳಲ್ಲಿನ ಗುಂಡಿಗಳೇ ಪ್ರಮುಖ ಕಾರಣ ಎಂದು ಅವರು ಆರೋಪಿಸಿದ್ದಾರೆ.
ರಸ್ತೆಗಳ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಮೈಲೇಜ್ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಅಶೋಕ್ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.







