HomeDavanagereಆಧ್ಯಾತ್ಮವಿಲ್ಲದ ಬದುಕಿಗೆ ಉತ್ಕರ್ಷವಿಲ್ಲ: ರಂಭಾಪುರಿ ಶ್ರೀ

ಆಧ್ಯಾತ್ಮವಿಲ್ಲದ ಬದುಕಿಗೆ ಉತ್ಕರ್ಷವಿಲ್ಲ: ರಂಭಾಪುರಿ ಶ್ರೀ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಮನುಷ್ಯನ ಬದುಕು ಭಗವಂತನ ಅಮೂಲ್ಯ ಕೊಡುಗೆಯಾಗಿದ್ದು, ಸುಖ-ಶಾಂತಿಯ ಜೀವನಕ್ಕೆ ಧರ್ಮವೇ ಆಶಾಕಿರಣ. ಉತ್ಕರ್ಷದ ಬದುಕು ಕಟ್ಟಿಕೊಳ್ಳಲು ಆಧ್ಯಾತ್ಮ ಜ್ಞಾನವೇ ಭದ್ರ ಅಡಿಪಾಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ನಡೆದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನಸ್ಸನ್ನು ಕೂಡಿಸುವ ಮತ್ತು ಧರ್ಮವನ್ನು ಕಟ್ಟುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಜನಜೀವನದ ಮೇಲೆ ಅಪಾರ ಪ್ರಭಾವ ಬೀರಿದ್ದು, ಎಲ್ಲ ಜಾತಿ-ಜನಾಂಗದವರು ಅದರ ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಕರೆ ನೀಡಿದರು.

ಇಂದಿನ ಅಶಾಂತಿ, ಅತೃಪ್ತಿ ಮತ್ತು ಅಸಹನೆಗೆ ತಾಳ್ಮೆ ಹಾಗೂ ಸಹನೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ವೀರಶೈವ ಧರ್ಮದಲ್ಲಿ ವಿಶ್ವಬಂಧುತ್ವದ ತತ್ವವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶಿವಶರಣರು ಉಳಿಸಿ ಬೆಳೆಸಿದ್ದಾರೆ. ಅಶುಭ ಮಾಸವೆಂದು ಪರಿಗಣಿಸಲ್ಪಡುವ ಆಷಾಢವನ್ನು ಇಷ್ಟಲಿಂಗ ಪೂಜೆಯ ಮೂಲಕ ಶುಭಮಾಸವನ್ನಾಗಿ ಪರಿವರ್ತಿಸಿದ ಕೀರ್ತಿ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಅಥಣಿ ವೀರಣ್ಣ ಮಾತನಾಡಿ, ಧರ್ಮದ ಫಲ ಬೇಕೆನ್ನುವವರು ಮೊದಲು ಧರ್ಮವನ್ನು ಆಚರಿಸಬೇಕು. ಆರೋಗ್ಯ, ಶಿಕ್ಷಣ, ಕಾನೂನು ಮತ್ತು ಧರ್ಮದ ಮೌಲ್ಯಗಳನ್ನು ಪಾಲಿಸದ ಕಾರಣ ಸಮಾಜದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಜನಜಾಗೃತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಕೈಗೊಂಡಿರುವ ಧರ್ಮಯಜ್ಞ ಎಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಸರಾಂತ ಲೆಕ್ಕ ಪರಿಶೋಧಕ ಮುಂಡಾಸ್ ವೀರೇಂದ್ರ ಕುಮಾರ್ ಅವರಿಗೆ “ಲೆಕ್ಕ ಪರಿಶೋಧಕ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ಉಪದೇಶಾಮೃತ ನೀಡಿದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಮನುಷ್ಯ ದೊಡ್ಡ ಮಾತುಗಳಿಗಿಂತ ದೊಡ್ಡ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪೂರ್ವಜರು ನೀಡಿದ ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಶ್ರೇಯಸ್ಸು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಸದಸ್ಯ ಎಸ್.ಕೆ. ವೀರಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಎ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಳಗಿನ ಜಾವ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಾದ ನೀಡಿದರು. ಬಳಿಕ ಅನ್ನದಾಸೋಹ ನಡೆಯಿತು.

“ಸುಖ-ಶಾಂತಿಯ ಬದುಕಿಗೆ ಧರ್ಮವೇ ಆಶಾಕಿರಣ; ಉತ್ಕರ್ಷದ ಜೀವನಕ್ಕೆ ಆಧ್ಯಾತ್ಮ ಜ್ಞಾನವೇ ನಿಜವಾದ ಅಡಿಪಾಯ.”

– ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img