ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕೃತಕ ಬುದ್ಧಿಮತ್ತೆ (AI) ಆಧುನಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಎಐ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯ ಪ್ರಧಾನಗುರು ಎಸ್.ಎಚ್. ಪೂಜಾರ ಹೇಳಿದರು.
ಶಾಲೆಯಲ್ಲಿ ಎಐ ಶಿಕ್ಷಕಿಯಾಗಿ ಸೌಭಾಗ್ಯ ಕೊಲ್ಲಾರಿ ಅವರನ್ನು ನೇಮಕ ಮಾಡಿಕೊಂಡು ಮಾತನಾಡಿದ ಅವರು, ಎಐ ತಂತ್ರಜ್ಞಾನ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸರ್ಕಾರದ ಈ ಕ್ರಮದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಚ್. ಮಾನೇಗಾರ, ಶಿಕ್ಷಕರಾದ ನೂರಹ್ಮದ್ ನದಾಫ್, ಬಸವರಾಜ ಗೌರಿಮನಿ, ಮಂಜುನಾಥ ಕಲ್ಯಾಣಮಠ, ಗೀತಾ ಪಾಟೀಲ್, ಎಸ್.ವಿ. ತಿಮ್ಮಾಪೂರ, ಗೀತಾ ಕುಂದರಗಿ, ಕವಿತಾ ಬಿನ್ನಾಳ ಹಾಗೂ ಸೌಭಾಗ್ಯ ಕೊಲ್ಲಾರಿ ಉಪಸ್ಥಿತರಿದ್ದರು.



