ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಹೆಚ್-68 ನ್ಯಾಯಾಲಯ ಆರೋಪಿ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.
ಮನೆಯಲ್ಲಿ ನಡೆದ ಜಗಳವೇ ಈ ಕೊಲೆಗೆ ಕಾರಣವಾಗಿತ್ತು. ಕಳೆದ ಜನವರಿಯಲ್ಲಿ ರಾಜಾಜಿನಗರ 4ನೇ ಬ್ಲಾಕ್‌ನ ನಿವಾಸದಲ್ಲಿ ಆರೋಪಿ ರಘು ತನ್ನ ತಂದೆ ರಾಮಚಂದ್ರ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ.
ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103 ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರಾದ ಚಿನ್ನವೆಂಕಟರವಣಪ್ಪ ಹಾಗೂ ಆರ್.ವಿ. ಭಟ್ ಅವರು ಆರೋಪಿಯ ವಿರುದ್ಧ ವಾದ ಮಂಡಿಸಿದ್ದರು. ಪ್ರಕರಣದ ಸಾಕ್ಷ್ಯಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ಸಿಸಿಹೆಚ್-68 ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಭರತ್ಕುಮಾರ್ ಅವರು, ಆರೋಪಿ ರಘು ತಪ್ಪಿತಸ್ಥ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇದರ ಜೊತೆಗೆ ಆರೋಪಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.



