ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಜನಕ್ಕೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.
ಬೆಟಗೇರಿಯಲ್ಲಿ ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ತರಕಾರಿ ಖರೀದಿ ಹೆಸರಿನಲ್ಲಿ ಮನೆಯಿಂದ ಜನ ಹೊರಗೆ ಬರುತ್ತಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಗ್ರಾಹಕರಂತೆ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸಿದೆ ಕೊರೊನಾ ಹರಡುವ ಎಲ್ಲ ಕಾರ್ಯಗಳು ಸದ್ಯ ಇಲ್ಲಿಯ ಮಾರುಕಟ್ಟೆಯಲ್ಲಿ ನಡೆಯುತ್ತಿವೆ.
ಮಾಂಸ, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡುಲು ಜನ ಮುಗಿ ಬೀಳುತ್ತಿದ್ದಾರೆ. ತಳ್ಳುವ ಗಾಡಿಯ ಮೂಲಕ ತರಕಾರಿ, ಹಣ್ಣು ಮಾರಲು ಸರ್ಕಾರ ಅವಕಾಶ ನೀಡಿದ್ದರೂ ಮಾರುಕಟ್ಟೆಯಲ್ಲಿಯೇ ವ್ಯವಹಾರ ಮಾಡಲಾಗುತ್ತಿದೆ. ಇದರಿಂದಾಗಿ ಗುಂಪು ಗೂಡಿ ಜನ ಖರೀದಿಸುತ್ತಿದ್ದಾರೆ. ಇದನ್ನು ಕಂಡ ಗದಗ – ಬೆಟಗೇರಿ ನಗರಸಭೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಕೊರೊನಾ ಮನೆ ಮನೆಯ ಒಳಗೂ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.