ವಿಜಯಸಾಕ್ಷಿ ಸುದ್ದಿ, ಗದಗ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಎಎಸ್ಐ ಸಾಹೇಬರು ಕೊನೆಗೂ ಎರಡು ಲಕ್ಷ ರೂ. ದಂಡ ಕಟ್ಟಿದ್ದಾರೆ. ಕಳೆದ ಭಾನುವಾರ ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಎಎಸ್ಐ ಸಾಹೇಬರು ಬಾಲಕಿಯ ಪೋಷಕರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದರು. ತಾಂಡಾದ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯತಿ ನಡೆದಿತ್ತು. ಎರಡು ಲಕ್ಷ ದಂಡ ಕಟ್ಟಲು ಶುಕ್ರವಾರ ಡೆಡ್ ಲೈನ್ ಇತ್ತು.
ಇದನ್ನೂ ಓದಿ ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!
ಆ ತಾಂಡಾದಲ್ಲಿ ಇವತ್ತಿಗೂ ಒಂದು ವ್ಯವಸ್ಥೆಯಿದೆ. ಇದೆ. ಯಾರೇ ಜಗಳ ಮಾಡಲಿ, ಹೊಡೆದಾಟ ಮಾಡಿಕೊಳ್ಳಲಿ, ಕುಟುಂಬ ಕಲಹ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದರೂ ಈ ವಿಷಯ ತಾಂಡಾದ ಹಿರಿಯರ ಕಿವಿಗೆ ಬೀಳದೆ ಠಾಣೆಯ ಮೆಟ್ಟಲು ಹತ್ತಲ್ಲ. ಹತ್ತಬಾರದು ಕೂಡ. ಒಂದು ವೇಳೆ ಹಿರಿಯರ ಮಾತು ಮೀರಿ ಠಾಣೆಗೆ ಬಂದವರಿಗೆ ಬಹಿಷ್ಕಾರ ಖಚಿತ. ಹೀಗಾಗಿ ಈ ಪೊಲೀಸಪ್ಪನ ಕಿತಾಪತಿ ಠಾಣೆಯ ಮೆಟ್ಟಲು ಏರಿಲ್ಲ.
ಸೋಮವಾರ ತಾಂಡಾದಲ್ಲಿ ಸಭೆ ಸೇರಿದ್ದ ಹಿರಿಯರು, ದಂಡ ಪಾವತಿಸುವಂತೆ ಎಎಸ್ಐ ಸಾಹೇಬರಿಗೆ ತಾಕೀತು ಮಾಡಿದ್ದರು. ಅದಕ್ಕೆ ಶುಕ್ರವಾರದ ಗಡುವನ್ನೂ ಮೀರಲಾಗಿತ್ತು. ಮೀರಿದರೆ ದ್ವಿಗುಣ (4,01,000 ರೂ.) ದಂಡ ಪಾವತಿಸಬೇಕಿತ್ತು. ಅಲ್ಲದೆ, ತಾಂಡಾಕ್ಕೆ ಕಾಲಿಡದಂತೆ ಬಹಿಷ್ಕಾರದ ಎಚ್ಚರಿಕೆಯೂ ಕೊಡಲಾಗಿತ್ತು.
ಹಿರಿಯರ ಸಭೆಯಲ್ಲಿ ಕಣ್ಣೀರು ಕೋಡಿ ಹರಿಸಿದ್ದ ಸಾಹೇಬರು, ಶಹರ ಠಾಣೆಯ ಸಿಬ್ಬಂದಿ ಮುಂದೆ, ನಾ ಏನೂ ಮಾಡೇ ಇಲ್ಲ..ಇನ್ನು ದಂಡ ಯಾಕ ಕಟ್ಲೀ ಅಂತ ಬಿಲ್ಡ್ ಅಪ್ ಕೊಟ್ಟಿದ್ದರು.
ಶುಕ್ರವಾರ ಸಾಹೇಬರು ಸೀದಾ ಸಮೀಪದ ಗೋವಾವನ್ನೇ ನೆನಪಿಸುವ, ಈಗ ಮುಚ್ಚಿರುವ ಹೋಟೆಲ್‌ಗೆ ಪತ್ನಿ ಸಮೇತ ಹೋಗಿ ಹಿರಿಯರ ಕೈಯಲ್ಲಿ 2 ಲಕ್ಷ ರೂ. ಕೊಟ್ಟು, ಎಸ್ಪಿ ಸಾಹೇಬರ ಗಮನಕ್ಕೆ ಈ ವಿಷಯ ಹೋಗಬಾರದು ಅಂತ ಮನವಿ ಮಾಡಿ, ಕೈ ಮುಗಿದು ಕಾಲ್ಕಿತ್ತಿದ್ದಾರೆ.
ಇದೇನೂ ಹೊಸದಲ್ಲ ಇವರಿಗೆ
ಈ ಪ್ರಕರಣ ಮಾತ್ರ ಬಯಲಿಗೆ ಬಂದಿದೆ. ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳು ಈ ಸಾಹೇಬರ ಲಿಸ್ಟ್ ನಲ್ಲಿವೆ. ಇವರಿಗೆ ಪ್ರತಿ ವಾರವೂ ಒಂದು ವೈರಟಿ ಬೇಕೇ ಬೇಕು. ಯಾವ ಡ್ಯೂಟಿ ಇದ್ದರೂ ಈ ಡ್ಯೂಟಿಯನ್ನು ಸಾಹೇಬರು ತಪ್ಪಿಸುವುದಿಲ್ಲವಂತೆ!
ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವುದು ಇವರ ಮೇಲಿನ ಮತ್ತೊಂದು ಆರೋಪ. ಜನತಾ ಕರ್ಫ್ಯೂ ಇದ್ದಾಗಲೂ ಇವರು ಎಣ್ಣೆ ತಪ್ಪಿಸಿಲ್ಲ ಎಂದು ಕೆಲವು ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ. ಎಎಸ್ಐ ಸಾಹೇಬರಿಗೆ ಠಾಣೆಯ ಮೇಲಧಿಕಾರಿಗಳಾದ ಪಿಎಸ್ಐ, ಸಿಪಿಐ ಮುಂತಾದವರೆಲ್ಲ ಲೆಕ್ಕಕ್ಕೇ ಇಲ್ಲ. ಈ ಕಚ್ಚೆ ಹರಕು ಎಎಸ್ಐ ಬಗ್ಗೆ ಯಾರ ಮುಂದೆ ಹೇಳಬೇಕು ಅನ್ನೋ ಗೊಂದಲ ಹಿರಿಯ ಅಧಿಕಾರಿಗಳಲ್ಲಿದೆ.
ಈ ಪೊಲೀಸಪ್ಪನಿಗೆ ಸಾರ್ವಜನಿಕರೇ ಪೊರಕೆ ಹಿಡಿಯುವ ಮುನ್ನ ಸೌಮ್ಯ ಸ್ವಭಾವದ ಎಸ್ಪಿ ಸಾಹೇಬರು ಗಮನ ಹರಿಸುವುದು ಒಳ್ಳೆಯದು. ಇಂತಹ ಪೊಲೀಸರಿಂದ ಇಲಾಖೆಯ ಮಾನ ಹರಾಜು ಆಗುವ ಮೊದಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಎಸ್ಪಿ ಸಾಹೇಬರೇ ತಾಂಡಾದ ಈ ಹೋರಿಗೆ ಮೂಗುದಾರ ಯಾವಾಗ? ಎಂದು ಜನರು ಕೇಳುತ್ತಿದ್ದಾರೆ.