ವಿಜಯಸಾಕ್ಷಿ ಸುದ್ದಿ, ಮೈಸೂರು
ಮೈಸೂರಿನಾದ್ಯಂತ 90ಕ್ಕೂ ಹೆಚ್ಚು ದೇವಾಲಯ ನೆಲಸಮಗೊಳಿಸಲು ಜಿಲ್ಲಾಡಳಿತ ಮುಂದಾಗಿರುವುದು ಸರಿಯಲ್ಲ. ಇದರಿಂದ ಹಿಂದು ಜನರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಮೈಸೂರು ಸಂಸದ ಪ್ರತಾಪಸಿಂಹ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆಡಿಪಿ ಸಭೆಯಲ್ಲಿ ಇದನ್ನೇ ಚರ್ಚೆ ಮಾಡಿದ್ದೇನೆ. ನ್ಯಾಯಾಲಯ ತೀರ್ಪು ನೆಪ ಮಾಡಿ ಮಧ್ಯರಾತ್ರಿ ಕಳ್ಳರ ರೀತಿ ಬಂದು ಹಿಂದು ದೇವಾಲಯ ಕೆಡವುತ್ತಿದ್ದಾರೆ. ಕಳ್ಳರು ದರೋಡೆಕೋರರು ಜನರಿಲ್ಲದ ವೇಳೆ ಮಾಡುವ ಹಾಗೆ ದೇವಸ್ಥಾನಗಳನ್ನು ಕೆಡವಲಾಗುತ್ತಿದೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ರಸ್ತೆ ಮಧ್ಯೆ, ಅಕ್ರಮವಾಗಿ ನಿರ್ಮಿಸಿರುವ ಯಾವುದೇ ಕಟ್ಟಡ ಕೆಡವಲಿ. ಕೇವಲ ಹಿಂದು ದೇವಸ್ಥಾನ ಮಾತ್ರ ಟಾರ್ಗೆಟ್ ಮಾಡುತ್ತಿರುವುದೇಕೆ. ಚರ್ಚ್ ಮತ್ತು ಮಸೀದಿ ಇಲ್ಲವೆ ? ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತೆತ್ತಿದ್ದರೆ ಸುಪ್ರೀಂ ಕೋರ್ಟ್ ಆರ್ಡರ್ ನೆಪ ಹೇಳುತ್ತಿದ್ದಾರೆ. ನಮ್ಮ ಹತ್ತಿರವೂ ಸುಪ್ರೀಂಕೋರ್ಟ್ ಆರ್ಡರ್ ಇದೆ. 2009ರಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಟಿರಿ. ಈ ಕಾರಣಕ್ಕಾಗಿಯೇ ರಾಜು ಮರ್ಡರ್ ಆಯಿತು ಎಂದು ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ದೇವರಾಜ ಅರಸ್ ರಸ್ತೆಯ ದರ್ಗಾ ತೆರವುಗೊಳಸಿದರೆ ಬಳೆ ತೊಟ್ಟು ಕೂರುವುದಿಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಅದೇಶ ಪರಾಮರ್ಶೆ ಮಾಡಿ ಮತ್ತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಬೇಕು. ನಮ್ಮ ಮನವಿಗೆ ಸ್ಪಂದಿಸಿದೆ ದೇವಸ್ಥಾನ ತೆರವು ಮಾಡಿದರೆ ರಾಜ್ಯಾದ್ಯಂತ ಜನಾಂದೋಲ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.