ಧಾರವಾಡ ಜಿಲ್ಲೆ ಅನ್ ಲಾಕ್ ಕುರಿತು ಪರಿಷ್ಕೃತ ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ರಾಜ್ಯ ಸರ್ಕಾರ ಕೋವಿಡ್ ಅನ್‌ ಲಾಕ್ ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿದ್ದು. ಜಿಲ್ಲೆಯಲ್ಲಿ 10 ದಿನಗಳ ಕೋವಿಡ್ ಪಾಸಿಟಿವಿಟಿ ದರ ಸರಾಸರಿ ದರ ಶೇ.4.5 ರಷ್ಟಿದೆ. ಧಾರವಾಡ ಜಿಲ್ಲೆಗೂ ಅನ್‌ ಲಾಕ್ ಆದೇಶ ವಿಸ್ತರಿಸಿ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಕೋವಿಡ್ ಲಸಿಕಾ ಅಭಿಯಾನದ ಕುರಿತು ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐ.ಸಿ.ಎಂ.ಆರ್ ವರದಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ. 5ಕ್ಕಿಂತಲೂ ಕಡಿಮೆಯಿದೆ. ಆದರೆ, ಸ್ಟೇಟ್ ವಾರ್ ರೂಮ್‌ ನಿಂದ ಸಿಎಂ ನೇತೃತ್ವದಲ್ಲಿ ಜರುಗಿದ ಸಭೆಗೆ ಧಾರವಾಡ ಜಿಲ್ಲೆಯ ಪಾಸಿಟಿವಿ ದರ ಶೇ. 5.7 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಅನ್‌ ಲಾಕ್ ಆದೇಶದಲ್ಲಿ ಜಿಲ್ಲೆಯ ಹೆಸರು ಕೈಬಿಟ್ಟಿತ್ತು.

ಇದನ್ನೂ ಓದಿ ಧಾರವಾಡ ಜಿಲ್ಲೆ ಅನ್ ಲಾಕ್

ಜಿಲ್ಲೆಯಲ್ಲಿ ಜನರು ಲಾಕ್‌ ಡೌನ್ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಹುಬ್ಬಳ್ಳಿ ವ್ಯಾಪಾರ ವಹಿವಾಟಿಗೆ ಹೆಸರಾಗಿದೆ. ಅಕ್ಕ ಪಕ್ಕದ ಜಿಲ್ಲೆಗಳ ಹಾಗೆಯೇ ಧಾರವಾಡ ಜಿಲ್ಲೆಯಲ್ಲಿ ಕೂಡ ಸ್ವಾಭಾವಿಕವಾಗಿ ಅನ್‌ ಲಾಕ್ ಮಾಡಬೇಕು. ಸರ್ಕಾರ ಹೊರಡಿಸಿದ ಅನ್‌ ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಿಲ್ಲೆಯಲ್ಲಿ ಪಾಲಿಸಲಾಗುವುದು. ಈ ಬಾರಿ ಅನ್‌ ಲಾಕ್ ಮಾರ್ಗಸೂಚಿಯಲ್ಲಿ ವ್ಯಾಪಾರ ವಹಿವಾಟಿಗಳಿಗೆ ಸಮಯ ಹೆಚ್ಚಿಸಲಾಗಿದೆ. ಬಿ.ಆರ್.ಟಿ.ಎಸ್ ಸೇರಿದಂತೆ ಅಂತರ್ ಜಿಲ್ಲಾ ಬಸ್ ಓಡಾಟ ಪ್ರಾರಂಭವಾಗವುದು. ಅಂತರಾಜ್ಯ ಬಸ್ ಓಡಾಟಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಿ ಮಂತ್ರಿಯವರ ಆಶ್ವಾಸನೆಯಂತೆ ನಾಳೆ ಜೂ. 21ರಂದು ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಲಾಗುವುದು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 18 ವರ್ಷ ಮೇಲ್ಪಟ್ಟ ಆರೋಗ್ಯ ಹಾಗೂ ಮಂಚೂಣಿ ಕಾರ್ಯಕರ್ತರು, ಸರ್ಕಾರ ಸೂಚಿಸಿದ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಲಾಗುವುದು. ಯುವ ಜನರು ಗೊಂದಲಕ್ಕೆ ಈಡಾಗುವುದು ಬೇಡ. 18 ವರ್ಷ ಮೇಲ್ಪಟ್ಟ ಮಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಸೇರಿದವರು ಮಾತ್ರ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.‌

ಜಿಲ್ಲೆಯಲ್ಲಿ ಸದ್ಯ 38,020 ಕೋವಿಡ್‌ ಶೀಲ್ಡ್, 12,460 ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 50,480 ಲಸಿಕೆ ಲಭ್ಯ ಇವೆ. ಜೂ. 21 ರಂದು‌ 27 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 201 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಭುರಾಮ್, ಜಿಪಂ ಸಿ.ಇ.ಓ ಡಾ. ಬಿ.ಸುಶೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಆರ್.ಸಿ.ಎಚ್ .ಓ ಡಾ.ಎಸ್.ಎಂ. ಹೊನಕೇರಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ಇದ್ದಾರೆ.


Spread the love

LEAVE A REPLY

Please enter your comment!
Please enter your name here