ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡುತ್ತಿದೆ. ಇದಕ್ಕಾಗಿ ಅವಳಿ ನಗರದಲ್ಲಿ ಊಹಾಪೋಹಗಳನ್ನು ಹಬ್ಬಿಸುತ್ತಿದ್ದು, ತಾವೇ ಗೆಲ್ಲುತ್ತೇವೆಂಬ ಗುಲ್ಲು ಹಬ್ಬಿಸಿ ಹುಚ್ಚುತನ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.
ಸೋಮವಾರ ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯ ಕೊನೆಯ ಘಟ್ಟದಲ್ಲಿದ್ದೇವೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ದಾಸರ, ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಬಾಕಳೆ ಅವರು ನಾಮಪತ್ರ ಸಲ್ಲಿಸಿದ್ದು, ಜಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಕಾಂಗ್ರೆಸ್ ದುರಾಡಳಿತ ದೂರವಿಡಲು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ನಗರಸಬೆಯಲ್ಲಿ ಬಿಜೆಪಿ 18+1 ಸೇರಿ 19 ಮತ್ತು ಕಾಂಗ್ರೆಸ್ 17+1 ಸೇರಿ 18 ಸಂಖ್ಯಾಬಲ ಹೊಂದಿವೆ. ಬಿಜೆಪಿಗೆ ಬಹುಮತವಿದ್ದರೂ ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಅವರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಅರ್ಜಿ ಹಾಕಿಸಿರುವುದು ಶಾಸಕ ಎಚ್.ಕೆ.ಪಾಟೀಲರಿಗೆ ಶೋಭೆ ತರುವುದಿಲ್ಲ ಎಂದರು.

ಗದುಗಿನ ಗಲ್ಲಿ, ವಾರ್ಡ್ ಬಗ್ಗೆ ಗೊತ್ತಿಲ್ಲದವರನ್ನೂ ಕರೆ ತರಲು ಯತ್ನಿಸಿರುವ ಕಾಂಗ್ರೆಸ್ಸಿಗರು ಮುಂದೆ ಅನುಭವಿಸುತ್ತಾರೆ. ಅಧಿಕಾರ ಹಿಡಿಯುವ ಸಲುವಾಗಿ ನಮ್ಮ ಪಕ್ಷದ ಸದಸ್ಯರ ಮೇಲೆ ಸಾಕಷ್ಟು ಒತ್ತಡ ತಂದಿದ್ದಾರೆ. ಸಾಲದು ಅಂತಾ ನಮ್ಮ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಭ್ರಷ್ಟಾಚಾರ ಮುಖವಾಡ ಕಳಚದಂತೆ ನೋಡಿಕೊಳ್ಳಲು ಇಂತಹ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಹರಿಹಾಯ್ದರು.

ಕಾಂಗ್ರೆಸ್ ನವರು ಯಾವಾಗಲೂ ನೇರ ರಾಜಕಾರಣ ಮಾಡಿಲ್ಲ. ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ನಾಲ್ಕು ಮತ ಪಡೆಯಲು ಯತ್ನಿಸಿರುವವರು ಕಳೆದ ಎಂಎಲ್ಎ ಚುನಾವಣೆಯಲ್ಲೂ ಇದೇ ರೀತಿಯ ತಂತ್ರಗಾರಿಕೆ ಮಾಡಿದ್ದರು. ಇದಕ್ಕಾಗಿ ಕಾಂಗ್ರೆಸ್ನಲ್ಲಿ ದೊಡ್ಡ ತಂಡವೇ ಇದೆ. ಆದರೆ, ಹಿಂದೆ ನಡೆದ ಹಾಗೆ ಕಾಂಗ್ರೆಸ್ ನವರ ಆಟ ಈಗ ನಡೆಯುವುದಿಲ್ಲ. ನಮ್ಮ ನಾಯಕರನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್ ನವರಿಗಿಲ್ಲ. ಅಲ್ಲದೇ, ಸಲೀಂ ಅಹ್ಮದ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದು, ಯಾರು ಎಂಬುವುದು ಜನರಿಗೆ ಗೊತ್ತಿದೆ ಎಂದು ಅನಿಲ್ ಮೆಣಸಿನಕಾಯಿ ಕುಟಿಕಿದರು.
ಸುದ್ದಿಗೋಷ್ಠಿಯಲ್ಲಿ ಸಂಗಮೇಶ ದುಂದೂರ, ಕಾಂತಿಲಾಲ್ ಬನ್ಸಾಲಿ, ಎಂ.ಎಂ.ಹಿರೇಮಠ, ಸಿದ್ದು ಪಲ್ಲೇದ ಉಪಸ್ಥಿತರಿದ್ದರು.